ಮೈಸೂರು ಟಾಪ್ 3 ನ್ಯೂಸ್..!
– ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್ಪ್ರೆಸ್ ರೈಲು.!
– ಎಚ್ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು
– ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ
NAMMUR EXPRESS NEWS
ಮಂಡ್ಯ: ತುತುಕುಡಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾಳೆ. ಮಂಡ್ಯದ ಕನಕ ಭವನದ ಹಿಂಭಾಗ ರೈಲ್ವೆ ಟ್ರಾಕ್ನಲ್ಲಿ ಘಟನೆ ನಡೆದಿದೆ. ಲಾವಣ್ಯ (18) ಗಂಭೀರ ಗಾಯಗೊಂಡವಳು.
ಲಾವಣ್ಯ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶುಕ್ರವಾರ ಹಾಸ್ಟೆಲ್ನಿಂದ ಕಾಲೇಜಿಗೆ ಹೋಗುವಾಗ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ತುತುಕುಡಿ ಎಕ್ಸ್ಪ್ರೆಸ್ ರೈಲು ಗುದ್ದಿದೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಗಾಯಾಳು ಲಾವಣ್ಯಳನ್ನು ಸ್ಥಳೀಯರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಚ್ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು
ಮಂಡ್ಯ: ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಎಚ್ಡಿಕೆಯನ್ನು ಕೆಟ್ಟ ಪದಗಳಿಂದ ಬೈದ ಹಿನ್ನೆಲೆಯಲ್ಲಿ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮತ್ತು ಮಂಡ್ಯದ ಸೈಬರ್ ಕ್ರೈಂ ಸೆಂಟ್ರಲ್ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿರುವ ಮಂಗಳ ಎಂಬಾಕೆ ಎಚ್ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ನಟ ದರ್ಶನ್ ಕೃತ್ಯ ಖಂಡಿಸಲು ಮಂಡ್ಯದಲ್ಲಿ ತಲಾ 150 ರೂ. ಕೊಟ್ಟು ಪ್ರತಿಭಟನೆ ಮಾಡಿಸಿದ್ದಾನೆ ಎಂದು ತಮ್ಮ ನಾಯಕನ ವಿರುದ್ಧ ಮಹಿಳೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಪೇಟೆ ಜೆಡಿಎಸ್ ಮುಖಂಡ ವಕೀಲ ಧನಂಜಯ್ ಕುಮಾರ್ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ!
ಮೈಸೂರು: ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರುವ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ರವಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ನಿವಾಸಿಯಾದ ರವಿ ಎಂಬಾತ ಪತ್ನಿ ಅಮುದಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ.
ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ರವಿಗೆ ಐಪಿಸಿ ಸೆಕ್ಷನ್ 498(ಎ ) ಪ್ರಕಾರ 2 ವರ್ಷ ಕಠಿಣ ಶಿಕ್ಷೆ ಒಂದು ಸಾವಿರ ದಂಡ ಹಾಗೂ ಐಪಿಸಿ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ಹಾಕಿ ಆದೇಶಿಸಿದೆ. ಮೈಸೂರು 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ತೀರ್ಪು ನೀಡಿದ್ದಾರೆ.