-ಬೆಳ್ಳಕ್ಕಿಗಳ ನಿಗೂಢ ಸಾವು
-ರಾಜ್ಯದಲ್ಲಿ ಹೈ ಅಲರ್ಟ್
ಶಿವಮೊಗ್ಗ: ಕರೊನಾ ಸೋಂಕು ಮತ್ತು ರೂಪಾಂತರಿ ಕರೊನಾ ಆತಂಕದ ನಡುವೆ ಹಕ್ಕಿಜ್ವರ ಭೀತಿ ದೇಶಾದ್ಯಂತ ದಟ್ಟವಾಗಿ ಆವರಿಸಿದೆ.
ನೆರೆಯ ರಾಜ್ಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (ಊ5ಓ8) ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ಬೆಳ್ಳಕ್ಕಿ ಮೃತಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.
ದೇಶದ ಅನೇಕ ರಾಜ್ಯಗಳಲ್ಲಿ ಪಕ್ಷಿಗಳು ನಿಗೂಢವಾಗಿ ಸಾಯುತ್ತಿವೆ. ಅದೇ ರೀತಿ ಬುಧವಾರ ಮಂಗಳೂರು ಸಮೀಪ ಮಂಜನಾಡಿ ಗ್ರಾಮದ ಆರಂಗಡಿ ಬಳಿಯ ಗುಡ್ಡವೊಂದರಲ್ಲಿ ಕೆಲವು ಕಾಗೆಗಳು ಸತ್ತಿದ್ದು, ರಾಜ್ಯಕ್ಕೂ ಹಕ್ಕಿಜ್ವರ ಕಾಲಿಟ್ಟಿರುವ ಶಂಕೆ ಆತಂಕ ಸೃಷ್ಟಿಸಿದೆ.
ಹೀಗಿರುವಾಗಲೇ ಗುರುವಾರ ಶಿವಮೊಗ್ಗ ನಗರದ ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರದ ಬಳಿ ಬೆಳ್ಳಕ್ಕಿಗಳು ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ.
ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಕ್ಕಿಗಳು ಸತ್ತು ಬಿದ್ದಿರುವುದು ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಕಾಲೇಜು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತ ಪಕ್ಷಿಗಳ ಅಂಗಾಂಗ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಪಕ್ಷಿಗಳ ಸಾವಿಗೆ ಕಾರಣ ತಿಳಿದು ಬರಲಿದೆ ಎಂದರು.