ರೇಷನ್ ಕಾರ್ಡ್ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ
– ಗೃಹಲಕ್ಷ್ಮಿ ಹಣ ಪಡೆಯಲು ಮನೆ ಯಜಮಾನಿ ಹೆಸರು ಕಡ್ಡಾಯ
NAMMUR EXPRESS NEWS
ರೇಷನ್ ಕಾರ್ಡ್ನಲ್ಲಿ ಮನೆ ಯಜಮಾನಿ ಎಂದು ಇದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಸಿಗಲಿದೆ. ಆ.16ರಿಂದ 19ರವರೆಗೆ 4 ದಿನಗಳ ಕಾಲ ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದ್ದು, ರೇಷನ್ ಅಂಗಡಿಗೆ ಹೋಗಿ ತಿದ್ದುಪಡಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಇದೆ. ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಪಡಿತರ ಚೀಟಿಯಲ್ಲಿ ಮಹಿಳೆ ಮುಖ್ಯಸ್ಥೆ ಆಗಿರಬೇಕು. 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಎಂದಿದ್ದು, ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ.
ರೇಷನ್ ಅಂಗಡಿಗೆ ಭೇಟಿ ನೀಡಿ ಮುಖ್ಯಸ್ಥರ ಹೆಸರು ಬದಲಾವಣೆ (ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರಿಸುವುದು) ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಬಯೋಮೆಟ್ರಿಕ್ ದೃಢೀಕರಣ ಮೂಲಕ ದಾಖಲೆಗಳನ್ನು ದೃಢೀಕರಿಸಿ ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಸ್ವೀಕೃತಿ ಪಡೆಯಬೇಕು.
ಆಹಾರ ಇಲಾಖೆ ಕಚೇರಿಯಿಂದ ಎಸ್ಎಂಎಸ್ ಬರಲಿದ್ದು, ಬಳಿಕ ಸ್ವೀಕೃತಿ ಪತ್ರ ನೀಡಿ ಮನೆಯ ಯಜಮಾನಿ ಹೆಸರು ಬದಲಿಸಿದ, ಸೇರ್ಪಡೆ ಮಾಡಿದ ಪಡಿತರ ಚೀಟಿ ಪಡೆಯಬಹುದು. ಆನ್ಲೈನ್ನಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಈ ಕೆಳಗಿನ ವೆಬ್ ಸೈಟ್ ಗಮನಿಸಬಹುದು. http://ahara.kar.nic.in/ ಇ- ಸೇವೆಗಳ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ/ ಹೊಸ ಸೇರ್ಪಡೆ ಆಯ್ಕೆ ಕ್ಲಿಕ್ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಅಗತ್ಯ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿದ ನಂತರ ಫಾರ್ಮ್ ಸಭ್ಮಿಟ್ ಕೊಡಿ. ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ. ಈ ನಂಬರ್ ಮೂಲಕ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾಗಿದೆ.