ಆಟಿ ಅಮಾವಾಸ್ಯೆಸಂಭ್ರಮ!
– ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಣೆ
– ಸಂಪ್ರದಾಯದ ಹಬ್ಬದಲ್ಲಿ ಜನರ ಅರೋಗ್ಯ ಕಾಳಜಿ
– ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ!
NAMMUR EXPRESS NEWS
ಉಡುಪಿ/ಮಂಗಳೂರು: ಉಡುಪಿ, ದಕ್ಷಿಣ ಕನ್ನಡದಲ್ಲಿ ವಿಶೇಷ ಆಟಿ ಅಮಾವಾಸ್ಯೆಯ ಸಂಭ್ರಮ ಕಂಡು ಬಂದಿತು.ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಪಾಲೆ ಮರ (ಹಾಲೆ ಮರ) ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದ ಬಳಿಕ ಬಳಿಕ ಕಹಿ ರಸವನ್ನು ತುರಿ ಹಾಕಿದ ಗಂಜಿಯನ್ನಾಗಿ ತಯಾರಿಸಿ ಮನೆಮಂದಿ ಎಲ್ಲರೂ ಹಬ್ಬದಂತೆ ಅಚರಿಸುವುದು ವಾಡಿಕೆ. ಈ ಹಬ್ಬವನ್ನು ಎಲ್ಲೆಡೆ ಮನೆ ಮಂದಿಯೆಲ್ಲಾ ಸೇರಿ ಆಚರಣೆ ಮಾಡಿದರು.
ಉಡುಪಿ ,ದಕ್ಷಿಣ ಕನ್ನಡದಲ್ಲಿ ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ)ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ.
ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ.
ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ!
ಆಟಿ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ. ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ.
ಆಚರಣೆ ವಿಶೇಷ ಏನು…?
ಇಪ್ಪತ್ತರ ದಶಕದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಅಂದು ವೈದ್ಯಕೀಯ ಚಿಕಿತ್ಸೆಗಳು ಗಗನಕುಸುಮವಾಗಿತ್ತು. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಅಂದಿನ ಕಾಲದಲ್ಲಿ ಸೊಪ್ಪು ಹಲಸು ಕಣಿಲೆ ಸೇರಿದಂತೆ ಹಳ್ಳಿಯ ಆಹಾರವನ್ನು ಸೇವಿಸುತಿದ್ದರು. ಅಮವಾಸ್ಯೆಯಂದು ಹಾಲೆಮರದ ಕಷಾಯವನ್ನು ಸೇವಿಸುತ್ತಾರೆಯೋ ಆರೋಗ್ಯದಿಂದಿರುತ್ತಾರೆ ಎಂಬುವುದು ಜನರ ಭಾವನೆಯಾಗಿದೆ. ಇಂದಿಗೂ ಆಟಿ ಅಮಾವಾಸ್ಯೆ ಆಚರಣೆಯನ್ನು ಇಲ್ಲಿನ ಜನ ಉಳಿಸಿಕೊಂಡು ಬರುತ್ತಿದ್ದಾರೆ.
ಹಲವೆಡೆ ಕಷಾಯ ವಿತರಣೆ
ಆಟಿ ಅಮಾವಾಸ್ಯೆಯ ಜು.17ರಂದು ಕರಾವಳಿಯ ಹಲವೆಡೆ ಹಾಲೆ ಮರದ ಕಷಾಯ ವಿತರಿಸಲಾಯಿತು. ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯವನ್ನು ಪಡೆದುಕೊಂಡರು. ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಲ್ಪಿಸಲಾಗಿತ್ತು. ಕಷಾಯಕ್ಕಾಗಿ ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ನಿಂತು ಕಷಾಯವನ್ನು ಸೇವಿಸಿದರು.
ಮಲೆನಾಡಲ್ಲೂ ಆಚರಣೆ ಉಂಟು!
ಮಲೆನಾಡಿನಲ್ಲಿ ಆಷಾಢ ಮುಗಿದ ನಂತರ ದಕ್ಷಿಣ ಕನ್ನಡದಲ್ಲಿ ಆಶಾಡ ಪ್ರಾರಂಭವಾದ ದಿನ ಈ ಕಷಾಯ ಕುಡಿಯುವ ಪದ್ಧತಿ ಬೆಳೆದು ಬಂದಿದೆ. ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲೂ ಆಚರಣೆ ಮಾಡಲಾಗುತ್ತದೆ. ಮಲೆನಾಡಿಗರಿಗೆ ಆಷಾಢವು ಒಂದು ತಿಂಗಳ ಮೊದಲೇ ಆಚರಣೆ ಮಾಡಲಾಗುತ್ತದೆ ಕರಾವಳಿಯಲ್ಲಿ ಒಂದು ತಿಂಗಳ ನಂತರ ಪ್ರಾರಂಭವಾಗುತ್ತದೆ. ಈ ದಿನ ಹಾಲೆ ಮರ ದಿವ್ಯ ಔಷಧಿ ಗುಣಗಳಿಂದ ಕೂಡಿರುತ್ತದೆ ಎಂಬುದು ಹಿಂದಿನವರ ನಂಬಿಕೆ.
ಗರಿಷ್ಠ ಎಷ್ಟು ಸ್ವೀಕರಿಸಬಹುದು?:
ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ. ಸೇವಿಸಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಕೆಲವರು ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಮಿಶ್ರ ಮಾಡುವುದೂ ಇದೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023