ಜೂನ್ ಮೊದಲ ವಾರ ಆಕಾಶದಲ್ಲಿ ಖಗೋಳ ವಿಸ್ಮಯ!
– ನೋಡಲು ಮಿಸ್ ಮಾಡಬೇಡಿ; ಈ ಅಪರೂಪದ ಗ್ರಹಗಳ ಮೆರವಣಿಗೆ!
– ಏನಿದು ಖಗೋಳ ವಿಸ್ಮಯ…?
NAMMUR EXPRESS NEWS
ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗ್ಗಿನ ಸೂರ್ಯೋದಯಕ್ಕೂ ಮೊದಲು ಅಪರೂಪದಕ್ಕೆ ಕಾಣಲು ಸಿಗುವ ಆರು ಗ್ರಹಗಳ ಮೆರವಣಿಗೆಯನ್ನು ಬರಿಗಣ್ಣಿನಿಂದ ನೋಡಬಹುದು ಎಂದು ಖ್ಯಾತ ಖಗೋಳ ವಿಜ್ಞಾನಿ ಡಾ.ಎಪಿ ಭಟ್ ತಿಳಿಸಿದ್ದಾರೆ. ಜೂನ್ 1ರಿಂದ ಪೂರ್ವ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವ ಶನಿ, ಮಂಗಳ, ಗುರು ಹಾಗೂ ಬುಧ ಗರಹಗಳ ಜತೆಗೆ ದೂರದರ್ಶಕದಲ್ಲಿ ನೋಡಬಹುದಾದ ನೆಪ್ಚೂನ್ ಹಾಗೂ ಯುರೇನಸ್ಗಳು ಕೂಡ ಕಾಣಸಿಗುತ್ತವೆ. ಒಟ್ಟಿನಲ್ಲಿ ಈ ದೃಶ್ಯ ಗ್ರಹಗಳು ಒಟ್ಟಾಗಿ ಮೆರವಣಿಗೆ ಹೊರಟಂತೆ ಕಾಣಿಸಲಿದೆ ಎಂದು ಹೇಳಿದ್ದಾರೆ.
ಕೆಲವು ವಾರಗಳಿಂದ ಸೂರ್ಯನಿಗೆ ನೇರವಾಗಿ ಬಂದು ಅಸ್ತವಾಗಿದ್ದ ಗುರುಗ್ರಹ ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದ ಜತೆ ಜತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಕೇವಲ ಕೆಲವು ದಿನಗಳಲ್ಲಿ ಕ್ಷಣ ಮಾತ್ರದಲ್ಲಿ ಕಾಣಿಸಿ ಮರೆಯಾಗುತ್ತದೆ. ಜೂನ್ ಒಂದರಂದು ಶನಿಗ್ರಹದ ಸಮೀ, ಜೂನ್ 2ರಂದು ನೆಪ್ಚೂನ್, ಮಂಗಳನ ಸಮೀಪ, ಜೂ.3ರಂದು ಯುರೇನಸ್ ಸಮೀಪ ಸರಿದು, ಜೂ.4ರಂದು ಗುರು, ಬುಧನ ಸಮೀಪ ಚಂದ್ರ ಕಾಣಲು ಸಿಗುತ್ತದೆ. ಈ ಆಕಾಶದ ಭವ್ಯತೆಗೆ ಚಂದ್ರ ಹಣತೆಯಂತೆ ಕಾಣಿಸಿ ಎಲ್ಲರನ್ನೂ ಆಕರ್ಷಿಸಲಿದೆ. ಅಂದರೆ ಈಗ ಸುಮಾರು 3 ಲಕ್ಷದ 70 ಸಾವಿರ ಕಿಮೀ. ದೂರದ ಚಂದ್ರ ಕೋಟಿ ಕೋಟಿ ಕಿಮೀ ದೂರದ ಗ್ರಹಗಳ ಜತೆ ಒಂದೇ ದೂರದಲ್ಲಿರುವಂತೆ ಕಾಣಿಸುವುದು ವಿಶೇಷ. ಈ ಅಪರೂಪದ ಖಗೋಳ ವಿಸ್ಮಯವನ್ನು ಖಗೋಳಾಸಕ್ತರು ನೋಡಿ ಆನಂದಿಸಬಹುದು ಎಂದು ಡಾ.ಎಪಿ ಭಟ್ ತಿಳಿಸಿದ್ದಾರೆ.