ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ..!
– 101 ಬಗೆ ಸೊಪ್ಪು ಹಾಕಿ ಪಲ್ಯ: ಭೂಮಿ ತಾಯಿಗೆ ಪೂಜೆ
– ಭೂಮಿಗೆ ಬಯಕೆ ಹಾಕುವ ಆಚರಣೆ
– ಪ್ರಕೃತಿಗೆ ಹತ್ತಿರವಾದ ಸಂಸ್ಕೃತಿಯ ಹಬ್ಬಕ್ಕೆ ಸ್ವಾಗತ
NAMMUR EXPRSS NEWS
ಭೂಮಿ ಎಲ್ಲರನ್ನು ಸಾಕುವ ತಾಯಿ. ಮಲೆನಾಡು, ಕರಾವಳಿ ಭಾಗದ ಪ್ರಮುಖ ಹಬ್ಬ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. 101 ಸೊಪ್ಪು, ತರಕಾರಿ, ಪದಾರ್ಥ ಒಟ್ಟು ಹಾಕಿ ಹಸಿರಾಗಿ ನಿಂತ ಭೂಮಿ ತಾಯಿಗೆ ಬಯಕೆ ಹಾಕುವ ಹಬ್ಬದ ಆಚರಣೆಯೇ ವಿಶೇಷ. ಮಲೆನಾಡಿನ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.
ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ನೂರಾ ಒಂದು ಸೊಪ್ಪಿನ ಕುಡಿ ಪಲ್ಯ ಮಾಡಿ ಅನ್ನ ಮಿಶ್ರಿತ ಬಯಕೆ ಹಾಕುತ್ತರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಮಲೆನಾಡಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ.
ಇಲಿಗೂ ಪೂಜೆ ಮಾಡ್ತಾರೆ..!
ಭೂಮಿ ಹುಣ್ಣಿಮೆ ಹಬ್ಬದ ವೇಳೆಯಲ್ಲಿ ಇಲಿಗೂ ಒಂದು ಎಡೆ ನೀಡಿ ನಮ್ಮ ಬೆಳೆಗೆ ತೊಂದರೆ ಕೊಡಬೇಡ ಎಂದು ಪ್ರಾರ್ಥಿಸಲಾಗುತ್ತದೆ. ಪೂಜೆ ವೇಳೆಯಲ್ಲಿ ಒಂದು ಕಡುಬನ್ನು ಗದ್ದೆಯ ಕೆಲವು ಸಸಿಗಳನ್ನು ಕಿತ್ತು ಅದರ ಕೆಳಗೆ ಹುಗಿಯಲಾಗುತ್ತೆ. ನಂತರ ಭತ್ತದ ಕೊಯ್ಲಿನ ಸಂದರ್ಭದಲ್ಲಿ ಈ ಕಡುಬನ್ನು ಪ್ರಸಾದ ಎಂದು ಸ್ವೀಕರಿಸಲಾಗುತ್ತದೆ. ನಂತರ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ಕೃಷಿ ಭೂಮಿಯಲ್ಲೇ ಊಟ ಮಾಡುತ್ತಾರೆ. ನಂತರ ಭತ್ತದ ಪೈರಿಗೆ ಪೂಜೆ ಸಲ್ಲಿಸಿದ ತರುವಾಗ ಆಹಾರದ ಎಡೆಯನ್ನು ಕಾಗೆಗೆ ನೀಡುತ್ತಾರೆ. ಈ ಸಂಪ್ರದಾಯಕ್ಕೆ ಕಾರಣವೆಂದರೆ, ನಿಧನರಾದ ಕುಟುಂಬದ ಹಿರಿಯರು ಬಂದು ಈ ಆಹಾರ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಬೇರೂರಿರುವುದು. ಇಂತಹ ಪದ್ಧತಿಯನ್ನು ಕಾಗೆಗೆ ಕರೆಯುವುದು, ಗೂಳಿ ಕರೆಯುವುದು ಎನ್ನಲಾಗುತ್ತದೆ. ಸಾಮಾನ್ಯವಾಗಿ ರೈತರು ಬೆಳೆದ ಬೆಳೆಯನ್ನು ಇಲಿಗಳು ನಾಶ ಮಾಡುವುದರಿಂದ ಅದನ್ನು ರೈತರ ಶತ್ರು ಎಂದೇ ಪರಿಗಣಿಸಲಾಗುತ್ತದೆ.
ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾದದ್ದು ಮತ್ತು ನಿಸರ್ಗದಲ್ಲಿ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.
ರಾತ್ರಿಯಿಡಿ ಜಾಗರಣೆ… ಅಡುಗೆ…!
ಭೂಮಿ ಹುಣ್ಣಿಮೆ. ರಾತ್ರಿಯಿಡಿ ಜಾಗರಣೆ ಮಾಡಿ ಹತ್ತೂ ಹಲವು ಅಡುಗೆ ತಯಾರಿಸಿ ಮುಂಜಾನೆ ಹೊತ್ತಲಿ ತೆನೆ ಹೊತ್ತು ಬಸುರಿಯಾದ ಭೂ ತಾಯಿಗೆ ಬಡಿಸಿ ಭೂ ತಾಯಿಯ ಬಯಕೆ ತಿರಿಸುವ ಪದ್ಧತಿ ಉಂಟು. ಈ ಸಂಪ್ರದಾಯ ಎಲ್ಲ ಆಚರಣೆಗಿಂತ ಭಿನ್ನವಾಗಿದೆ.