ಭಾರತದ ಹೆಮ್ಮೆಯ ‘ಚಂದ್ರಯಾನ-3’ಕ್ಕೆ ಕೌಂಟ್ ಡೌನ್!
– ಚಂದ್ರನ ಅಂಗಳದಲ್ಲಿ ಲ್ಯಾಂಡರ್, ರೋವರ್ ಇಳಿಸಿದ ನಾಲ್ಕನೇ ದೇಶ ಆಗುತ್ತಾ ಭಾರತ?
– ಕೋಟಿ ಕೋಟಿ ಭಾರತೀಯರ ಶುಭಾಶಯ
NAMMUR EXPRESS NEWS
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ ‘ಚಂದ್ರಯಾನ-3’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಪೂರ್ವನಿಗದಿಯಂತೆ ಎಲ್ಲವೂ ನಡೆದರೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಚಂದ್ರಯಾನ-3ರ ಉಪಗ್ರಹವನ್ನು ಹೊತ್ತ ಎಲ್ಎಂವಿ-3 ರಾಕೆಟ್ ನಭದತ್ತ ಜಿಗಿಯಲಿದೆ. ಚಂದ್ರನ ಅಂಗಳದಲ್ಲಿ ‘ವಿಕ್ರಂ ಲ್ಯಾಂಡರ್’ ಮತ್ತು ‘ರೋವ’ ಬಂಡಿಯನ್ನು ಇಳಿಸುವ ಈ ಕಾರ್ಯಾಚರಣೆಯು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
2019ರಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ನೌಕೆಯನ್ನು ಇಳಿಸುವ ಚಂದ್ರಯಾನ-2 ಕಾರ್ಯಚಾರಣೆಯು ಭಾಗಶಃ ಯಶಸ್ವಿಯಾಗಿತ್ತು. ಚಂದ್ರನ ಪರಿಭ್ರಮಣ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ, ಚಂದ್ರನ ನೆಲಮುಟ್ಟುವಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು, ಎರಡನೇ ಹಂತದ ಕಾರ್ಯಾಚರಣೆ ವಿಫಲವಾಗಿತ್ತು. ಆ ಕಾರ್ಯಾಚರಣೆಯಲ್ಲಿ ಎದುರಾಗಿದ್ದ ತೊಡಕುಗಳನ್ನು ನಿವಾರಿಸುವ ಕಾರ್ಯತಂತ್ರವನ್ನು ಚಂದ್ರಯಾನ-3ರಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವಲ್ಲಿ ತೊಡಕುಗಳು ಎದುರಾದರೆ, ರೋವರ್ ಬಂಡಿಯನ್ನು ವಿಕ್ರಮ್ನಿಂದ ಹೊರಗೆ ಕಳುಹಿಸುವಲ್ಲಿ ತೊಂದರೆಗಳು ಎದುರಾದರೆ, ಏನು ಮಾಡಬೇಕು ಎಂಬುದನ್ನೂ ಪೂರ್ವನಿಗದಿ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ-2ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸಲು ಇಸ್ರೋ ಯೋಜನೆ ಹಾಕಿಕೊಂಡಿತ್ತು. ಚಂದ್ರಯಾನ- 3ರಲ್ಲೂ ದಕ್ಷಿಣ ಧ್ರುವದಲ್ಲೇ ಲ್ಯಾಂಡರ್ ಇಳಿಸಲಾಗುವುದು. ಚಂದ್ರನಲ್ಲಿ ಲ್ಯಾಂಡರ್ ಮತ್ತು ರೋವರ್ಗಳನ್ನು ಈಗಾಗಲೇ ಇಳಿಸಿರುವ ಅಮೆರಿಕ, ರಷ್ಯಾ ಮತ್ತು ಚೀನಾ ಉತ್ತರ ಧ್ರುವದಲ್ಲಿ ಆ ಕಾರ್ಯಾಚರಣೆ ನಡೆಸಿವೆ.
ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸುವಲ್ಲಿ ಮತ್ತು ರೋವರ್ ಅನ್ನು ಲ್ಯಾಂಡರ್ ಒಳಗಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರೆ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಆ ಕಾರ್ಯಾಚರಣೆ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜತೆಗೆ, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಾಲ್ಕನೇ ದೇಶ ಎನಿಸಲಿದೆ.
ಎಲ್ಎಂವಿ-3 ನೌಕೆಯು ನೆಲದಿಂದ ಜಿಗಿದ ಕೆಲವೇ ನಿಮಿಷಗಳಲ್ಲಿ ಪ್ರೊಪಲ್ಟನ್ ನೌಕೆಯನ್ನು ಭೂಮಿಯಿಂದ ಪೂರ್ವನಿಗದಿತ ಎತ್ತರದ ಕಕ್ಷೆಗೆ ಸೇರಿಸಲಿದೆ. ಭೂಮಿಯ ಸುತ್ತ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುವ ಪ್ರೊಪಲ್ಟನ್ ನೌಕೆಯು ಹಲವು ಹಂತಗಳಲ್ಲಿ ತನ್ನ ಕಕ್ಷೆಯ ಎತ್ತರವನ್ನು ಹೆಚ್ಚಿಸಿಕೊಳ್ಳಲಿದೆ. ನಂತರ ಭೂಮಿಯ ಕಕ್ಷೆಯಿಂದ ಚಂದ್ರನ ಕ್ಷಕೆಯತ್ತ ಪ್ರಯಾಣ ಆರಂಭಿಸಲಿದೆ. ಚಂದ್ರನ ಮೇಲ್ಮನಲ್ಲಿನ ಖನಿಜ ಸಂಪತ್ತು, ನೀರಿನ ಇರುವಿಕೆ, ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೆಚ್ಚಿನ ಅರಿವಿಗೆ ಈ ಸಂಶೋಧನೆ ಕಾರಣವಾಗಲಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023