ಸಂಕ್ರಾತಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?
– ಸೂರ್ಯನಿಗೂ ಸುಗ್ಗಿ ಹಬ್ಬಕ್ಕೂ ಸಂಬಂಧವೇನು?
– ಸಂಕ್ರಾತಿಗೆ ಉಂಟು ಹಲವು ಬಗೆಯ ಹೆಸರು!
NAMMUR EXPRESS NEWS
ತೀರ್ಥಹಳ್ಳಿ ಸಂಕ್ರಾಂತಿ ವಿಶೇಷ:
ಹಿಂದೂಗಳಲ್ಲಿ ಹತ್ತು ಹಲವು ಹಬ್ಬಗಳನ್ನು ಅದ್ಧೂರಿಯ ಜೊತೆಗೆ ಅರ್ಥ ಪೂರ್ಣವಾಗಿ ಆಚರಿಸುವ ಸಂಪ್ರದಾಯವಿದೆ. ಈ ಆಚರಣೆಯಲ್ಲಿ ಸಂಕ್ರಾತಿ ಹಬ್ಬವೂ ಒಂದು. ದೇಶದ ವಿವಿಧ ಕಡೆ ನಾನಾ ಹೆಸರಿನಿಂದ ಕರೆಯಲ್ಪಡುವ ಹಬ್ಬವೇ ಸುಗ್ಗಿ ಹಬ್ಬ ಅಥವಾ ಸಂಕ್ರಾತಿ ಹಬ್ಬ.
ಸಂಕ್ರಾತಿಯ ವಿಶೇಷಗಳು:
ಸಂಕ್ರಾತಿಯ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವನು ಎಂಬ ವಾಡಿಕೆ ಇದೆ. ಸುಗ್ಗಿ ಹಬ್ಬದಂದು ಸೂರ್ಯನು ತನ್ನ ಸ್ಥಾನ ಅಂದರೆ ಪಥವನ್ನು ಬದಲಾಯಿಸುವನು. ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನ ಇದಾಗಿದೆ. ಇದರ ಪ್ರಕಾರ ಮೊದಲ ಆರು ತಿಂಗಳ ಕಾಲ ಉತ್ತರಾಯಣವಾಗಿದ್ದು 6 ತಿಂಗಳ ಕಾಲ ಬೆಳಕು ಹೆಚ್ಚಿದ್ದು ಉಳಿದ 6ತಿಂಗಳು ಅಂದರೆ ಜೂನ್ 15ರಿಂದ ದಕ್ಷಿಣಾಯಣ ಆರಂಭವಾದಾಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ.
ಸುಗ್ಗಿ ಹಬ್ಬದ ಬಗ್ಗೆ ಪುರಾಣ ಕಥೆಗಳು ಏನು ಹೇಳುತ್ತವೆ?
ಉತ್ತರಾಯಣದಲ್ಲಿ ಪ್ರಾಣ ತ್ಯಜಿಸಿದರೆ ಸ್ವರ್ಗ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆಯಿಂದ ಭೀಷ್ಮ ಪಿತಾಮಹರು ಇಹಲೋಕವನ್ನು ತ್ಯಜಿಸಲು ಮಕರ ಸಂಕ್ರಾತಿಯನ್ನು ಆಯ್ಕೆ ಮಾಡಿದ್ದರು ಎಂದು ಹೇಳಲಾಗುತ್ತದೆ.
ಭೂಮಿಗೆ ಗಂಗಾ ಮಾತೆಯ ಆಗಮನ:
ಪುರಾಣದ ಪ್ರಕಾರ ಮಕರ ಸಂಕ್ರಾಂತಿಯಂದು ಗಂಗಾ ಮಾತೆ ಧರೆಗೆ ಇಳಿದಳು ಎಂದು ಹೇಳಲಾಗುತ್ತದೆ. ಕಪಿಲ ಮುನಿಯ ಆಶ್ರಮದಿಂದ ಸಾಗರಕ್ಕೆ ಸೇರಿತ್ತು ಎಂದು ಹೇಳುವ ಪುರಾಣ ಕಥೆಯಿದೆ. ಅಷ್ಟೇ ಅಲ್ಲದೆ ರಾಜ ಭಗೀರಥನ ಪೂರ್ವಜರ ಆತ್ಮಗಳಿಗೆ ಗಂಗಾ ನೀರಿನಿಂದ ಮೋಕ್ಷ ದೊರೆಯಿತು ಎಂದು ಹೇಳಲಾಗುತ್ತದೆ.
ಸಂಕ್ರಾತಿಗೆ ಉಂಟು ನಾನಾ ಬಗೆಯ ಹೆಸರು:
ಸಂಕ್ರಾತಿ ಹಬ್ಬ ಎಂಬುದು ಯಾವುದೇ ಒಂದು ನೆಲಕ್ಕೆ ಸೀಮಿತವಾಗದೆ ದೇಶದ ಎಲ್ಲೆಡೆ ಬೇರೆ ಬೇರೆ ನಾಮದೊಂದಿಗೆ ಹರಡಿದೆ ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳುನಾಡಿನಲ್ಲಿ ಪೊಂಗಲ್, ದೆಹಲಿ ಹರಿಯಾಣ ಸುತ್ತಮುತ್ತ ಸಕ್ರಾತ್, ಪಂಜಾಬಿನಲ್ಲಿ ಮಾಘಿ ಹೀಗೆ ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ.
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿದೆ ಸುಗ್ಗಿ ಆಚರಣೆ :
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂಬ ವಾಡಿಕೆಯ ಮಾತಿದೆ. ಅದೇ ರೀತಿ ಸುಗ್ಗಿ ಹಬ್ಬದಂದು ಎಳ್ಳು ಬೆಲ್ಲದ ಜೊತೆ ಸಂಕ್ರಾಂತಿ ಕಾಳನ್ನು ಆತ್ಮೀಯರಿಗೆ ಹಂಚಲಾಗುತ್ತದೆ. ದೇಶಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವುದು, ಗಾಳಿಪಟ ಹಾರಿಸುವುದು, ಹಸುಗಳಿಗೆ ಕಿಚ್ಚು ಹಾಯಿಸುವುದನ್ನು ಈ ದಿನ ಮಾಡಲಾಗುತ್ತದೆ.
ಇದಲ್ಲದೇ ಪುಣ್ಯ ನದಿ ಗಂಗಾದಲ್ಲಿ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಉತ್ತರ ಭಾರತದ ಕೆಲವೆಡೆ ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಹಳದಿ ವಸ್ತ್ರವನ್ನು ಧರಿಸಿ ಸೂರ್ಯನಿಗೆ ನೀರನ್ನು ಅರ್ಪಿಸುತ್ತಾರೆ. ನೈವೇದ್ಯವಾಗಿ, ಹರಿಯುವ ಹೊಳೆಯಲ್ಲಿ ಎಳ್ಳನ್ನು ತೇಲಿಸಿ ಬಿಟ್ಟು ಸೂರ್ಯ ಚಾಲೀಸಾ ಪಠಿಸುತ್ತಾರೆ.
ಈ ವರ್ಷ ಹಬ್ಬ ಯಾವಾಗ:
ಪ್ರತಿವರ್ಷ ಜನವರಿ 14 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಸಂಕ್ರಾಂತಿ ಹಬ್ಬ ಜನವರಿ 14ರ ಬದಲು ಜನವರಿ 15ರ ಸೋಮವಾರ ಬಂದಿದೆ. ಏಕೆಂದರೆ ಜನವರಿ 14 ರಂದು ಮಧ್ಯಾಹ್ನ 2:44 ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನು ಪ್ರವೇಶಿಸುತ್ತಾನೆ. ಜನವರಿ 14 ರ ಮಧ್ಯಾಹ್ನ 2:44ರ ಮೇಲೆ ಹಬ್ಬ ಆಚರಿಸಲು ಆಗುವುದಿಲ್ಲ. ಹೀಗಾಗಿ ಜನವರಿ 15ರಂದು ಆಚರಿಸಬಹುದಾಗಿದೆ.