- ಒಮ್ಮೆಗೆ 10 ನೋಟು ಬದಲಾಯಿಸಿಕೊಳ್ಳಬಹುದು
- ಬದಲಾಯಿಸುವುದು ಹೇಗೆ?.. ಇಲ್ಲಿದೆ ಮಾಹಿತಿ
NAMMUR EXPRESS NEWS
ಹೊಸದಿಲ್ಲಿ: 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್ ಬ್ಯಾನ್ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್ ಬ್ಯಾನ್ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆ.30ರ ತನಕ ಸಮಯ ಇದೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ಬದಲಾಯಿಸುವುದು ಹೇಗೆ?
ಸಾರ್ವಜನಿಕರು ತಮ್ಮ ಬಳಿ 2,000 ರೂ. ಮುಖಬೆಲೆಯ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ಯಾಂಚ್ಗೆ ಹೋಗಿ ಹಣ ಡಿಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ. ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆ ಕೊಡಬೇಕಿಲ್ಲ. ಈ ನೋಟನ್ನು ಅಮಾನ್ಯ ಮಾಡಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟುಗಳ ವಿನಿಮಯಕ್ಕೆ ಸರ್ಕಾರ ಕೊಟ್ಟಿರುವ ಕಾಲಾವಕಾಶ ಮುಗಿದ ಬಳಿಕ ಈ ನೋಟು ಅಸಿಂಧುಗೊಳ್ಳಬಹುದಾ ಎಂಬ ಮಾಹಿತಿ ತಿಳಿದಿಲ್ಲ.
ಒಮ್ಮೆಗೆ 20,000 ಡಿಪಾಸಿಟ್
ಸಾರ್ವಜನಿಕರು ಒಮ್ಮೆಗೆ 20,000 ರೂ. ಮೊತ್ತದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ 2,000 ರೂ. ಮುಖಬೆಲೆಯ 10 ನೋಟುಗಳನ್ನು ಮಾತ್ರ ಎಕ್ಸ್ಚೇಂಜ್ ಮಾಡಬಹುದು.
ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ಕೂಡ ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ಏಕಕಾಲದಲ್ಲಿ 2,000 ರೂ. ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.
ಹಿಂಪಡೆಯಲು ಕಾರಣ ಏನು?
ಈಗ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಲಾಗಿದೆ. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. 2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲ. ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇದೆ. ಎಟಿಎಂಗಳಲ್ಲಿ 2,000 ರೂ. ಕರೆನ್ಸಿ ನೋಟು ಸಿಗುವುದಿಲ್ಲ.
ಜನರ ಬಳಿಯೂ 2000 ನೋಟು ಇಲ್ಲ!
2018ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023ಮಾರ್ಚ್ 31ಕ್ಕೆ ಶೇ.10.8ಕ್ಕೆ ಬಂದಿಳಿದಿದೆ. ಜನರು ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ. ಈಗ ಮೊಬೈಲ್ನಲ್ಲಿ ಪೇಮೆಂಟ್ ಆಪ್ ಗಳು ಮೂಲಕ ಸುಲಭವಾಗಿ ವಹಿವಾಗಿ ವಹಿವಾಟು ನಡೆಯುತ್ತಿದೆ. ಆನ್ಲೈನ್ ಕರೆನ್ಸಿ ಬಳಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಯಾರಿಗೂ ನಗದು ಒಯ್ಯುವ ಅಗತ್ಯ ಕಾಣಿಸುವುದಿಲ್ಲ.