ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ!
– ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ
– ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನುಕೂಲ?
NAMMUR EXPRESS NEWS
ಬಡ ಕುಟುಂಬಗಳ ಹಿತಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2016ರಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿಗೆಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಭಾರತದಾದ್ಯಂತ ಈಗಾಗಲೇ ಬರೋಬ್ಬರಿ 10.35 ಕೋಟಿ ಫಲಾನುಭವಿಗಳು ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಲಾಗುತ್ತದೆ. ಮಾತ್ರವಲ್ಲ, ಎಲ್ಪಿಜಿ ಸಂಪರ್ಕದ ಜೊತೆಗೆ, 800 ರೂಪಾಯಿಗಿಂತ ಹೆಚ್ಚು ಮೌಲ್ಯದ ಉಚಿತ ರಿಫೆಲ್, ಉಚಿತ ಸ್ಟವ್ ಒದಗಿಸಲಾಗುತ್ತದೆ. ಸರಕಾರ ಈಚೆಗೆ ಭಾರೀ ಪ್ರಮಾಣದ ಸಬ್ಸಿಡಿ ಕೂಡ ಘೋಷಣೆ ಮಾಡಿರುವುದರಿಂದ ಮರುಪೂರಣ ಕೂಡ ಅತ್ಯಂತ ಸುಲಭವಾಗಿದೆ. ಹೀಗಾಗಿ ಬಡ ಕುಟುಂಬಗಳಿಗೆ ಈ ಯೋಜನೆ ಬಹಳ ಉಪಯುತ್ತವಾಗಿದ್ದು, ಅರ್ಹ ಮಹಿಳೆಯರು ತಕ್ಷಣ ಆನ್ಲೈನ್ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದು.
ಅರ್ಜಿ ಸಲ್ಲಿಸಲು ಯಾರು ಅರ್ಹರು?:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮುಂಚೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಅನೇಕ ಅರ್ಹರಿಗೆ ಸಮರ್ಪಕ ಮಾಹಿತಿ ದೊರೆಯದೇ ಇದ್ದಿದ್ದರಿಂದ ಅರ್ಜಿ ಸಲ್ಲಿಸಲಾಗದೆ ಈ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ ಇದೀಗ ಅವಕಾಶದಿಂದ ವಂಚಿತರಾದವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು 18 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರು ಮಾತ್ರ ಅರ್ಹರಿರುತ್ತಾರೆ ಮತ್ತು ಕುಟುಂಬದ ಸದಸ್ಯರಲ್ಲಿ ಬೇರೆ ಯಾರೊಬ್ಬರ ಹೆಸರಿನಲ್ಲಿಯೂ ಎಲ್ಪಿಜಿ ಕನೆಕ್ಷನ್ ಇರಬಾರದು. ಈ ಅರ್ಹತೆಯುಳ್ಳ ಎಲ್ಲಾ ಮಹಿಳೆಯರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರ ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಹೊಸದಾಗಿ 75 ಲಕ್ಷ ಅರ್ಹತೆ ಹೊಂದಿರುವ ಮಹಿಳೆಯರಿಗೆ ಈ ಯೋಜನೆಯನ್ನು ಒದಗಿಸಲು ಮುಂದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲಾತಿಗಳು ಬೇಕಾಗುತ್ತದೆ :
– ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
– ಬಿಪಿಎಲ್ ರೇಷನ್ ಕಾರ್ಡ್
– ಬ್ಯಾಂಕ್ ಪಾಸ್ ಬುಕ್
– ಪಾಸ್ ಪೋರ್ಟ್ ಸೈಜ್ ಫೋಟೋ
– ಜಾತಿ ಪ್ರಮಾಣ ಪತ್ರ
– ವಿಳಾಸ ಪ್ರಮಾಣ ಪತ್ರ
ಈ ಎಲ್ಲಾ ಪ್ರಮುಖ ದಾಖಲಾತಿಗಳೊಂದಿಗೆ ಹತ್ತಿರವಿರುವ ಗ್ರಾಮ ಒನ್ ಕಂಪ್ಯೂಟರ್ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ತಕ್ಷಣ ಅರ್ಜಿ ಸಲ್ಲಿಸಿದರೆ ಯೋಜನೆಯ ಪ್ರಯೋಜನ ನಿಶ್ಚಿತವಾಗಿಯೂ ಸಿಗಲಿದೆ. ಏಕೆಂದರೆ ಈ ಬಾರಿ ಗ್ಯಾಸ್ ಏಜನ್ಸಿಗಳಿಗೆ ಟಾರ್ಗೆಟ್ ನೀಡದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಯಾವುದೇ ಜಿಲ್ಲೆ ರಾಜ್ಯಕ್ಕೆ ಇಂತಿಷ್ಟು ಎಂದು ನಿಗದಿ ಮಾಡದೇ ಇರುವುದರಿಂದ ಬೇಗ ಅರ್ಜಿ ಸಲ್ಲಿಸಿದವರು, ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ಎರಡು ರೀತಿಯ ಸಿಲಿಂಡರ್ ಪಡೆಯಲು ಅವಕಾಶವಿರುತ್ತದೆ. ಮೊದಲನೆಯದಾಗಿ 14.2 ಕೆಜಿಯ ಒಂದು ಸಿಲಿಂಡರ್ ಅಥವಾ 5 ಕೆಜಿಯ ಎರಡು ಸಿಲಿಂಡರ್ ಪಡೆಯಲು ಆಯ್ಕೆ ಮಾಡಿಕೊಳ್ಳಬಹುದು. ಇನ್ನೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಸಂಬ೦ಧಿಸಿದ ಯಾವುದೇ ಹೆಚ್ಚಿನ ಮಾಹಿತಿ ಬೇಕಾದರೆ ತಮ್ಮ ವ್ಯಾಪ್ತಿಯಲ್ಲಿ ಬರುವ ಹತ್ತಿರದ ಗ್ಯಾಸ್ ಏಜೆನ್ಸಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಸಹಾಯವಾಣಿ ಸಂಖ್ಯೆ : 1800 266 6696