ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಅವಕಾಶ!
– 733 ಹುದ್ದೆಗಳಿಗೆ ಅರ್ಜಿ ಆಹ್ವಾನ
– ಪಿಡಿಒ, ಎಸ್ ಡಿಎ ಕಾರ್ಯದರ್ಶಿ ಹುದ್ದೆಗಳ ನೇಮಕ
NAMMUR EXPRESS NEWS
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ವಿವಿಧ ವೃಂದಗಳ ನೇರ ನೇಮಕಾತಿ ಮೂಲಕ ಖಾಲಿ ಇರುವ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಸನ್ನದ್ಧವಾಗಿದೆ. ರಾಜ್ಯದ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಹುದ್ದೆ ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಕೆ: ಒಟ್ಟು 733 ಹುದ್ದೆಗಳ ಭರ್ತಿಗೆ ಈಗಾಗಲೇ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ)ದ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಲು ತಯಾರಿ ನಡೆದಿದೆ. ಈಗಾಗಲೇ ಕೆಪಿಎಸ್ಸಿ ಮೂಲಕ ಹುದ್ದೆ ಭರ್ತಿಗೆ ಆರ್ಡಿಪಿಆರ್ ಇಲಾಖೆಯಿಂದ ಪ್ರಸ್ತಾವನೆಯೂ ಸಲ್ಲಿಸಲಾಗಿದೆ. ಡಿಸೆಂಬರ್ ಮೊದಲ ವಾರ ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ.
ಈ ಹುದ್ದೆಗಳು ಭರ್ತಿ ಪ್ರಕ್ರಿಯೆ ಆರಂಭವಾದರೆ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಮಾತ್ರವಲ್ಲದೇ, ಹಾಲಿ ಇರುವ ಗ್ರಾಮ ಪಂಚಾಯತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೂ ಆಶಾಭಾವನೆ ಮೂಡಲಿದೆ. ಏಕೆಂದರೆ ರಾಜ್ಯದ ಹಲವ ಗ್ರಾಮ ಪಂಚಾಯತಿಗಳಲ್ಲಿ ಒಬ್ಬ ಪಿಡಿಒಗೆ ಎರಡೂರು ಪಂಚಾಯಿತಿಗಳ ಪ್ರಭಾರ ನೀಡಲಾಗಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ. ಜೊತೆಗೆ ಉದ್ಯೋಗಾಕಾಂಕ್ಷಿಗಳ ವಯಸ್ಸಿನ ಮಿತಿಯೂ ಮೀರುತ್ತಿದೆ. ಹುದ್ದೆಗಳು ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ (ಆರ್ಡಿಪಿಆರ್) ಇಲಾಖೆಯಲ್ಲಿ ಪಿಡಿಒ 660, ಕಾರ್ಯದರ್ಶಿ (ಗ್ರೇಡ್ 1) 350, ಕಾರ್ಯದರ್ಶಿ (ಗ್ರೇಡ್ 2) 415 ಹುದ್ದೆಗಳು ಸೇರಿ ಒಟ್ಟು 1,425 ಹುದ್ದೆಗಳು ಖಾಲಿ ಇವೆ. ಈ ಪೈಕಿ ಇದೀಗ 733 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನೇಮಕಾತಿ ನಡೆಯಲಿರುವ ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ:
ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) :
ಒಟ್ಟು 150 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗುತ್ತಿದ್ದು; ಈ ಹುದ್ದೆಗಳಿಗೆ ಯಾವುದೇ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ಸ್ ಪದವಿ ಪರೀಕ್ಷೆ ಪಾಸ್ ಮಾಡಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಪರಿಗಣಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕಾರ್ಯದರ್ಶಿ ಗ್ರೇಡ್ 1: ಒಟ್ಟು 135 ಗ್ರೇಡ್ 1 ಕಾರ್ಯದರ್ಶಿ ಹುದ್ದೆಗಳ ನೇಮಕ ನಡೆಯಲಿದ್ದು; ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾರ್ಯದರ್ಶಿ ಗ್ರೇಡ್ 2 : ಅದೇ ರೀತಿ ಒಟ್ಟು 343 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳ ನೇಮಕ ನಡೆಯಲಿದ್ದು; ಈ ಹುದ್ದೆಗಳಿಗೂ ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.
ದ್ವಿತೀಯ ದರ್ಜೆ ಲೆಕ್ಕ ಸಹಾಯಕ : ಇನ್ನು ಒಟ್ಟು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ ನಡೆಯಲಿದ್ದು ಈ ಹುದ್ದೆಗಳಿಗೂ ಸಹ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಹೇಗೆ?: ಕೆಪಿಎಸ್ಸಿಯಿಂದ ಅಭಿವೃದ್ಧಿಪಡಿಸಿರುವ ಕೆಪಿಎಸ್ಸಿ-ಉದ್ಯೋಗ (ಇಂಟೆಗ್ರೇಟೆಡ್ ಪ್ರಿ ಎಕ್ಸಾಮಿನೇಷನ್ ಸಾಪ್ಟರ್) ಮೂಲಕ ಆನ್ಲೈನ್ನಲ್ಲಿ ಹೊಸ ಹುದ್ದೆಗಳ ನೇಮಕಾತಿಗಾಗಿ ಲೆವಲ್-1 ಮತ್ತು ಲೆವಲ್ -2 ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಬಳಿಕ ಪ್ರಸ್ತಾವನೆಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಪ್ರಕ್ರಿಯೆ ನಡೆಯಲಿದೆ.