ರಕ್ತದಾನ ಮಾಡಿ ಜೀವ ಉಳಿಸೋಣ!
– ಇಂದು ವಿಶ್ವ ರಕ್ತದಾನಿಗಳ ದಿನ: ರಕ್ತದಾನಿಗಳಿಗೆ ಸಲಾಂ
– ಯಾರು ರಕ್ತದಾನ ಮಾಡಬಹುದು?
NAMMUR EXPRESS NEWS
ದಾನಗಳಲ್ಲೇ ಶ್ರೇಷ್ಠ ದಾನ ‘ರಕ್ತದಾನ’!. ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಇಂತಹ ಮಹತ್ವದ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಜೂ. 14 ರಂದು ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ. ಈ ದಿನದಂದು ಸಮಸ್ತ ರಕ್ತದಾನಿಗಳಿಗೆ ನಮನಗಳು.
ರಕ್ತದಾನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ಸರ್ಕಾರ, ರಕ್ತನಿಧಿಗಳು ಹಾಗೂ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿವೆ.
ಜತೆಗೆ ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯವೂ ನಡೆಯುತ್ತಿದೆ.
ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಇಂಟರ್ನ್ಯಾಷನಲ್ ಫೆರಡೇಷನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಪ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಘೋಷಿಸಿದೆ. ರಕ್ತದಾನಿಗಳನ್ನು ಪ್ರೇರೇಪಿಸಲು ಪ್ರತಿ ವರ್ಷ ಜ. 12ರಂದು ಯುವ ರಕ್ತದಾನಿಗಳ ದಿನ, ಜೂ. 14ರಂದು ವಿಶ್ವ ರಕ್ತದಾನಿಗಳ ದಿನ ಹಾಗೂ ಭಾರತದಲ್ಲಿ ಅ. 1ರಂದು ರಾಷ್ಟ್ರೀಯ ರಕ್ತದಾನ ದಿನ ಆಚರಿಸಲಾಗುತ್ತದೆ.9.75 ಲಕ್ಷ ಯೂನಿಟ್ ರಕ್ತ ಸಂಗ್ರಹ: ರಾಜ್ಯದಲ್ಲಿ ಅಂದಾಜು 8.08 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ನಿಗದಿತ ಗುರಿ 8,08,529ಗಿಂತ ಹೆಚ್ಚುವರಿಯಾಗಿ 9,75,785 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶೇ. 121 ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ 248 ರಕ್ತ ನಿಧಿಗಳಿದ್ದು, ಜನರು ತಮ್ಮ ಹತ್ತಿರದ ರಕ್ತ ನಿಧಿಗಳಿಗೆ ಸ್ವಯಂ ಪ್ರೇರಿತರಾಗಿ ತೆರಳಿ ರಕ್ತದಾನ ಮಾಡಬಹುದಾಗಿದೆ.
ಯಾರು ರಕ್ತದಾನ ಮಾಡಬಹುದು?
18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಕನಿಷ್ಠ 45 ಕೆ.ಜಿ. ದೇಹದ ತೂಕ ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್ ಬಿ) ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ.
ಯಾರು ರಕ್ತದಾನ ಮಾಡಬಾರದು?
ಅನಾರೋಗ್ಯ ಹೊಂದಿರುವವರು, ನಿಯಮಿತ ಹಾಗೂ ನಿರಂತರ ಔಷಧ ಸೇವಿಸುವವರು, ಎಚ್ಐವಿ/ಏಡ್ಸ್, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಹೆಪಟೈಟಿಸ್ ಬಿ ಸೋಂಕಿತರು, ಸಾಂಕ್ರಾಮಿಕ ರೋಗಿಗಳು, ಮಾದಕ ವ್ಯಸನಿಗಳು, ಕಡಿಮೆ ತೂಕ ಹೊಂದಿರುವವರು ಹಾಗೂ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡುವಂತಿಲ್ಲ.
ರಕ್ತದಾನದ ಉಪಯೋಗಗಳು
ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾನಪಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗಿ ಹೃದಯಘಾತ ಆಗುವುದನ್ನು ಶೇ. 80 ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳು ತಡೆಯಲು ರಕ್ತದಾನ ಸಹಕಾರಿಯಾಗಿದೆ. ಆದರೆ, ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳ ಕಾಲ ದಾನ ಮಾಡಬಾರದು ಎನ್ನುತ್ತಾರೆ ವೈದ್ಯರು.
‘ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ 18-65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತಪ್ಪದೇ ರಕ್ತದಾನ ಮಾಡಬೇಕು. ಯುವ ಜನರು ತಮ್ಮ 18 ವರ್ಷ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆ ದಿನದಂದು ಹಾಗೂ ನಂತರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರರ ಜೀವದಾನಕ್ಕೆ ನೆರವಾಗಬೇಕು.