ಗೋವುಗಳ ಮಾರಣಹೋಮ..ಎಲ್ಲಿ ಸ್ವಾಮಿ ಗೋ ಶಾಲೆ?
– ಎಲ್ಲೆಡೆ ಅನಾಥ ಗಂಡು ಕರುಗಳು, ದನಗಳ ಸಾವು
– ತಾಲೂಕಿಗೊಂದು ಗೋಶಾಲೆ ಪ್ರಸ್ತಾಪ ಏನಾಯ್ತು?
ವಿಶೇಷ ವರದಿ: ನವ್ಯ
NAMMUR EXPRESS NEWS
ಹಿಂದೂ ಧರ್ಮದ ಪ್ರಕಾರ ಹಸುಗಳು ದೇವರಿಗೆ ಸಮಾನ. ಹಿಂದೂ ಧರ್ಮದಲ್ಲಿ ಕಾಮಧೇನು, ಗೋಮಾತೆ ಎಂದು ಹಸುಗಳನ್ನು ಪೂಜಿಸಲಿದ್ದಾರೆ. ಹಸುವನ್ನು ಪೂಜಿಸಿದರೆ ಕೋಟಿ ದೈವಗಳ ಆರಾಧಿಸಿದಂತೆ ಎಂದು ನಂಬುತ್ತಾರೆ. ಸನಾತನ ಧರ್ಮಿಯರಾದ ನಾವು ಗೋವುಗಳು ಕೇವಲ ಪ್ರಾಣಿಗಳಲ್ಲ, ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳಿಗೆ ತಾಯಿಯ ಸ್ಥಾನವನ್ನು ನೀಡಿರುತ್ತೇವೆ. ಗೋಮಾತೆಯನ್ನು ಹಿಂದೂ ಧರ್ಮದಲ್ಲಿ ಸ್ವ ಬಳಕೆಗೂ ಮೀರಿ ದೇವರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಅದಕ್ಕಾಗಿ ದೀಪಾವಳಿಯಲ್ಲಿ ಗೋಪೂಜೆಯ ದಿನ ಗೋವುಗಳಿಗೆ ವಿಶೇಷವಾಗಿ ಸಿಂಗರಿಸಿ ಪೂಜಿಸಲಾಗುತ್ತದೆ. ಏಕೆಂದರೆ ಅವುಗಳನ್ನು ಅನುಗ್ರಹ, ನಿಸ್ವಾರ್ಥತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಸುಗಳು ಎಲ್ಲವನ್ನೂ ಶುದ್ಧಿಕರಿಸುವ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ.
ಮುಂಜಾನೆ ಹಸುಗಳನ್ನು ನೋಡುವುದು ಮಂಗಳಕರ ಮತ್ತು ಅದೃಷ್ಟವೆಂದು ಹಿಂದೂಗಳು ನಂಬುತ್ತಾರೆ. ಆದರೆ ಜನರು ಸಾಕಿದ ಹಸುಗಳು ಅವರ ಉಪಯೋಗಕ್ಕಾಗಿ ಬಳಸಿಕೊಂಡು ನಂತರ ಅವುಗಳು ವಯಸ್ಸಾದ ಮೇಲೆ ಹಾಲು ಕೊಡುವುದಿಲ್ಲ ಎಂದು ಅದನ್ನು ಸಾಗಿಸಲು ಯೋಚಿಸುತ್ತಾರೆ. ಪ್ರತಿ ವರ್ಷವೂ ಕೂಡ ಹಸುಗಳು ಕರುಗಳಿಗೆ ಜನ್ಮ ನೀಡುತಿದ್ದು, ಗಂಡು ಕರುಗಳು ಜನಿಸಿದರೇ ಯಾರೂ ಕೂಡ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನು ಬೇರೆಯವರಿಗೆ ಮಾರುತ್ತಾರೆ. ಇತ್ತೀಚಿಗೆ ಪ್ರತಿ ಊರಲ್ಲೂ ಹೋರಿಗಳು, ಗಂಡು ಕರುಗಳು ಅನಾಥವಾಗಿರುವುದು ಕಾಣ ಸಿಗುತ್ತದೆ. ಅನೇಕರು ದಾರಿ ಮೇಲಿರುವ ಗಂಡು ಜಾನುವಾರುಗಳನ್ನು ಗೋ ಮಾಂಸಕ್ಕಾಗಿ ಹತ್ಯೆ ಮಾಡಲು ಬಳಸುತ್ತಾರೆ. ಅಥವಾ ಹಸು ಸಾಕಿದವರೇ ರಸ್ತೆಬದಿ ಬಿಟ್ಟು ಹೋಗುತ್ತಾರೆ. ರಸ್ತೆ ಅಪಘಾತದಲ್ಲಿ ಪ್ರತಿ ದಿನ ನೂರಾರು ಗೋವುಗಳು ಜೀವ ಬಿಡುತ್ತವೆ.
ಗಂಡು ಕರುಗಳ ಮಾರಣ ಹೋಮ ಏಕೆ?
ಗಂಡು ಕರುಗಳಿಂದ ರೈತರಿಗೆ ಆರ್ಥಿಕವಾಗಿ ಲಾಭ ಇಲ್ಲದೇ ಇರುವುದರಿಂದ ಈ ರೀತಿ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರ ಪರಿಣಾಮ ಕರುಗಳು ಬೀದಿಪಾಲಾಗಿ ಎಲ್ಲೆಂದರಲ್ಲಿ ಬಿದ್ದು ಸಾಯಿತ್ತವೆ. ಹಾಗೂ ರಸ್ತೆಯಲ್ಲಿ ಓಡಾಡಲು ಆಗದೆ ಯಾವುದೋ ವಾಹನಗಳ ಅಡಿ ಸಿಲುಕಿ ಒದ್ದಾಡಿ ಪ್ರಾಣ ಬಿಡುತ್ತಿವೆ.
ಪ್ರತಿ ತಾಲೂಕಿಗೆ ಬೇಕಿದೆ ಗೋಶಾಲೆ!
ಎಲ್ಲೆಡೆ ಗಂಡು ಕರುಳು ಸೇರಿದಂತೆ ಜಾನುವಾರುಗಳ ಮಾರಣಹೋಮ ನಡೆಯುತ್ತಿದ್ದು ಇದಕ್ಕೆಲ್ಲ ಮುಖ್ಯ ಕಾರಣವೇ ತಾಲೂಕಿನಲ್ಲಿ ಯಾವುದೇ ಗೋಶಾಲೆ ಇಲ್ಲದಿರುವುದು. ಕೆಲವೊಮ್ಮೆ ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಗೋಶಾಲೆಗೆ ಇದ್ದರೆ ಈ ರೀತಿ ಹಸುಗಳ ಮಾರಣಹೋಮ ನಡೆಯುತ್ತಿರಲಿಲ್ಲ. ಇದರಿಂದ ರಸ್ತೆಯ ಮೇಲೆ ದನಗಳ ಸಂಖ್ಯೆ ಹೆಚ್ಚಾಗಿ ಪ್ಲಾಸ್ಟಿಕ್ ಹಾಗೂ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ಅನಾಹುತಕ್ಕೆ ಒಳಗಾಗುತ್ತಿವೆ.ತುರ್ತಾಗಿ ತಾಲೂಕಿಗೊಂದು ಗೋಶಾಲೆ ನಿರ್ಮಾಣ ಮಾಡುವ ಮೂಲಕ ಹಸುವನ್ನು ಸಂರಕ್ಷಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬಿಜೆಪಿಗೂ ಮನಸಿಲ್ಲ.. ಕಾಂಗ್ರೆಸ್ ಮನಸಿಲ್ಲ… ಎಲ್ಲವೂ ರಾಜಕೀಯಕ್ಕಷ್ಟೇ!
ಗೋವುಗಳನ್ನೇ ರಾಜಕೀಯ ದಾಳ ಮಾಡಿಕೊಂಡು ರಾಜಕೀಯ ಮಾಡುವ ಪಕ್ಷಗಳು ಈ ವಿಚಾರದಲ್ಲಿ ಇದುವರೆಗೆ ಎಲ್ಲಿಯೂ ಗೋ ಶಾಲೆ ಮಾಡಿಲ್ಲ. ಕಾಟಾಚಾರಕ್ಕೆ ಮಾಡಿದ್ರು ಅವು ಈಗ ಕೆಲಸ ಮಾಡುತ್ತಿಲ್ಲ. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಮಾಡಿ ಅಲ್ಲಿ ಲಾಭದಾಯಕವಾಗಿ ಅವಗಳನ್ನು ಸಾಕುವ ಯೋಜನೆ ರೂಪಿಸಬೇಕು. ಈ ಬಗ್ಗೆ ಯಾವ ಪಕ್ಷ, ಯಾವ ಸರ್ಕಾರಕ್ಕೂ ಮನಸಿಲ್ಲ. ಎಲ್ಲರೂ ತಮ್ಮ ರಾಜಕೀಯಕ್ಕೆ ಗೋವುಗಳ ಹೆಸರು ಬಳಸಿಕೊಳ್ಳಲಾಗುತ್ತಿದೆ ಅಷ್ಟೇ. ಜಿಲ್ಲೆಗೆ ಒಂದಾದ್ರು ಗೋ ಶಾಲೆ ತಕ್ಷಣ ಶುರು ಮಾಡಲಿ ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಕಳಕಳಿ.