ಮೈಕ್ರೋ ಫೈನಾನ್ಸ್, ಫೈನಾನ್ಸ್ ಸಾಲ ಜೀವ, ಜೀವನ ತೆಗೆಯುತ್ತೆ ಹುಷಾರ್!
– ಸಾಲ ಕೊಡ್ತಾರೆ…ಬಡ್ಡಿ ಕಟ್ಟಿಸಿ ಜೀವ ತೆಗೀತಾರೆ
– ಬಡ ಕುಟುಂಬಗಳೇ ಟಾರ್ಗೆಟ್
– ದಿನೇ ದಿನೇ ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣಗಳು!
ವಿಶೇಷ ವರದಿ: ನಿಶಾ
NAMMUR EXPRESS NEWS
ಬದುಕು ತುಂಬಾ ಕಷ್ಟ. ಅದರಲ್ಲಿಯೂ ಬಡ ಕುಟುಂಬದಲ್ಲಿ ಹುಟ್ಟಿದರೆ ಬದುಕು ಈಗ ದುಬಾರಿ. ಆದರೆ ಬಡ ವರ್ಗದ ಜನರಿಗೆ ಮೈಕ್ರೋ ಫೈನಾನ್ಸ್, ಫೈನಾನ್ಸ್ ಸಾಲದ ನೆಪದಲ್ಲಿ ಸಂಘ ಸಂಸ್ಥೆ ಮಾಡಿಸಿ ಸಾಲ ನೀಡಿ ಬಳಿಕ ಕೆಲವು ಸಂಘಗಳು ಜನರ ನೆಮ್ಮದಿಯನ್ನೇ ಕಸಿದಿವೆ. ಬಡ ವರ್ಗದ ಜನರು ಮುಗ್ಧರು ಹಾಗೂ ಪ್ರಾಮಾಣಿಕರು. ಹೆಚ್ಚಿನ ಶಿಕ್ಷಣ ಇಲ್ಲದ ಕಾರಣ ಸಾಲ ಕೊಡುವ ಆಸೆ ತೋರಿಸಿ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಾರೆ. ಸಾಲ ನೀಡುವಾಗ ಬೆಣ್ಣೆಯಲ್ಲಿ ನೂಲು ತೆಗೆದಂತೆ ಹೇಳುವ ಮೈಕ್ರೋ ಫೈನಾನ್ಸ್ ಆಮೇಲೆ ಕಂತು, ಬಡ್ಡಿ ಕಟ್ಟದಿದ್ದಲ್ಲಿ ಜನರ ಮುಂದೆ ಅವಮಾನ ಮಾಡಿ ಹಿಂಸೆ ನೀಡುತ್ತಾರೆ. ಇದರಿಂದ ಇದೀಗ ಪ್ರತಿ ದಿನ ಅನೇಕರು ಜೀವ, ಜೀವನ ಕಳೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಮೈಕ್ರೋಫೈನೆನ್ಸ್ ಕಿರುಕುಳಕ್ಕೆ ರೈತ ಮಹಿಳೆ ಸಾವನ್ನಪ್ಪಿದ್ದಾಳೆ. ಅನೇಕರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಉದ್ಯಮ, ಮನೆ, ಕೃಷಿ, ಮಗಳ ಮದುವೆ, ವಾಹನ ಇತರೆ ಕಾರಣಕ್ಕೆ ತಕ್ಷಣ ಸಾಲ ಸಿಗೋದು ಈ ಮೈಕ್ರೋ ಫೈನಾನ್ಸ್ ಅಲ್ಲಿ ಮಾತ್ರ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಸಂಸ್ಥೆಗಳು ಹಿಂಸೆ ನೀಡುತ್ತಿವೆ ಎಂಬ ಆರೋಪ ಇದೀಗ ಕೇಳಿ ಬಂದಿವೆ.
ಬ್ಯಾಂಕ್ ಬಡವರ ಪಾಲಿಗಿಲ್ಲ!
ರಾಷ್ಟ್ರೀಯ ಹಾಗೂ ಇತರೆ ಖಾಸಗಿ ಬ್ಯಾಂಕ್ ಬಡವರಿಗೆ ಗಗನಕುಸುಮವಾಗಿವೆ. ಬ್ಯಾಂಕಲ್ಲಿ ಮಧ್ಯಮ, ಶ್ರೀಮಂತ ವರ್ಗಕ್ಕೆ ಮಾತ್ರ ಸಾಲ ಸಿಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆ ತಂದಿವೆ. ಆದರೆ ಹಣಕಾಸು ಸ್ವಾತಂತ್ರ್ಯ ಯಾವ ಸರ್ಕಾರಗಳು ಕೊಟ್ಟಿಲ್ಲ.
ಬಡ್ಡಿ ಸಾಲ ಬೇಡ, ದುಡಿಮೆ ಹೆಚ್ಚಿಸಿ..!
ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲವನ್ನು ಮಾಡಬೇಡಿ. ಸರ್ಕಾರದಿಂದ ಹಲವು ಯೋಜನೆಗಳು ಇವೆ. ಸ್ವಯಂ ಉದ್ಯೋಗವನ್ನು ಮಾಡಿ ಹಣವನ್ನು ಗಳಿಸಿ.ಅದರಲ್ಲೂ ಮಹಿಳೆಯರಿಗೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ ಝೆಡ್ ಸ್ವಯಂ ಉದ್ಯೋಗ ಮಾಡಲು ಅನೇಕ ಪ್ಲಾನ್ ಸಬ್ಸಿಡಿ ಮೂಲಕ ಲೋನ್ ಸರ್ಕಾರವೇ ನೀಡುತ್ತದೆ. ಬಡ್ಡಿ ಸಾಲ ಮಾಡಿ, ಪ್ರತಿ ದಿನವೂ ನೆಮ್ಮದಿ ಇಲ್ಲದೆ ಕಳೆಯಬೇಡಿ. ಅದರ ಬದಲು ನಿಮ್ಮ ಮನೆಯ ಎಲ್ಲಾ ಸದಸ್ಯರೂ ದುಡಿಮೆ ಮಾರ್ಗ ಕಲಿತು ಹೆಚ್ಚು ಹೆಚ್ಚು ಗಳಿಸಿ.