ಬೀದಿ ಮೇಲೆ ನಾಯಿ ಮರಿ ಬಿಡಬೇಡಿ ಪ್ಲೀಸ್!
– ರಸ್ತೆ ಮೇಲೆ ತಂದು ಬಿಡುವ ಮರಿಗಳ ಮಾರಣಹೋಮ
– ವಾಹನಗಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಡುತ್ತಿವೆ ಪುಟ್ಟ ಮರಿಗಳು
– ಅಯ್ಯೋ ಎನಿಸಲ್ಲವೇ ಮೂಕ ಪ್ರಾಣಿಗಳ ರೋಧನೆ?
NAMMUR EXPRESS NEWS
ನಾಯಿ ನಿಯತ್ತಿನ ಪ್ರಾಣಿ. ಮನುಷ್ಯ ನಿಯತ್ತು ಮರೆತರೂ ನಾಯಿ ನಿಯತ್ತು ಮರೆಯಲ್ಲ. ತನ್ನ ಮನೆಗಾಗಿ ತನ್ನ ಪ್ರಾಮಾಣಿಕ ಸೇವೆ, ಪ್ರೀತಿ ನೀಡುತ್ತದೆ. ಆದರೆ ಇದೀಗ ನಾಯಿ ಮರಿ ಹಾಕುವ ಸಮಯ. ಈ ಸಂದರ್ಭದಲ್ಲಿ ಸಾವಿರಾರು ನಾಯಿ ಮರಿಗಳು ಒದ್ದಾಡಿ, ಊಟ ಇಲ್ಲದೆ ಪ್ರಾಣ ಬಿಡುತ್ತಿರುವ ಘಟನೆ ಪ್ರತಿ ಊರು, ಪ್ರತಿ ರಸ್ತೆ ಮೇಲೆ ಕಾಣುತ್ತಿದೆ. ಆದರೆ ಇಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮುಗ್ದ ಪ್ರಾಣಿಗಳನ್ನು ರಸ್ತೆ ಮೇಲೆ ಹಾಕುತ್ತಿದ್ದಾನೆ.
ನಾಯಿಗಳು ಹೆಚ್ಚು ಹೊಂದಿಕೊಳ್ಳುವ ಮತ್ತು ನಾವು ಎಷ್ಟೇ ಪ್ರೀತಿ ತೋರಿಸಿದರೂ ಅದಕ್ಕಿಂತ ನೂರು ಪಟ್ಟು ಹೆಚ್ಚಾಗಿ ನಮ್ಮನ್ನು ಪ್ರೀತಿಸುವ ಜೀವಿಗಳಾಗಿವೆ. ಯಾವುದೇ ದ್ವೇಷ ಇಲ್ಲದೆ ನಿಸ್ವಾರ್ಥ ಪ್ರೀತಿ ಕೊಡುವುದು ನಾಯಿ. ಅಷ್ಟಿಲ್ಲದೆ ನಾಯಿ ಎಂದರೆ ನಿಯತ್ತು ಎನ್ನುತ್ತಾರಾ ನಮ್ಮ ಹಿರಿಯರು. ಇಷ್ಟೆಲ್ಲ ಪ್ರೀತಿ ಕೊಡೋ ನಾಯಿಯನ್ನು ಮನೆಯಲ್ಲಿ ಸಾಕಿ ಅದು ಮರಿ ಹಾಕಿದ ಮೇಲೆ ಬೀದಿ ಮೇಲೆ ಪುಟ್ಟ ಪುಟ್ಟ ಕಂದಮ್ಮಗಳನ್ನು ತಂದು ಬಿಡುತ್ತಿರುವ ಘಟನೆಗಳು ಎಲ್ಲೆಡೆ ನಡೆಯುತ್ತಿವೆ. ಮೂಕ ಪ್ರಾಣಿಗಳನ್ನು ಬೀದಿ ಮೇಲೆ ಬಿಟ್ಟರೆ ಅವು ಎಲ್ಲಿ ಹೋಗುತ್ತದೆ. ಪುಟ್ಟ ಮರಿಗಳಾಗಿದ್ದರಿಂದ ಆಹಾರ ಇಲ್ಲದೆ ಒದ್ದಾಡಿ ಸಾಯುವುದು ಹಾಗೂ ಯಾವುದೊ ವಾಹನಗಳ ಅಡಿ ಸಿಲುಕಿ ರಸ್ತೆಯಲ್ಲಿಯೇ ಸಾಯುವಂತಹ ಅಮಾನವೀಯ ಘಟನೆಯು ನಡೆಯುತ್ತಿದೆ.
ನಮ್ಮ ಹಾಗೆ ಮೂಕ ಪ್ರಾಣಿಗಳಿಗೂ ಬದುಕಿದೆ ಎಂದು ಜನರು ಯಾಕೆ ಯೋಚಿಸುತ್ತಿಲ್ಲ? ಸ್ವಲ್ಪ ಹವಾಮಾನ ಬದಲಾದರೂ ನಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬೀದಿ ಮೇಲೆ ಬಿಟ್ಟಿರುವ ಪುಟ್ಟ ಪುಟ್ಟ ನಾಯಿ ಮರಿಗಳ ಗತಿ ಏನು?
ಮನುಷ್ಯರು ಮನೆ ಇಲ್ಲದಿದ್ದರೆ ಆಶ್ರಮ ಸೇರುತ್ತಾರೆ, ಏನಾದರೂ ತಿನ್ನುವ ಬಯಕೆ ಇದ್ದಲ್ಲಿ ಒಂದು ಸ್ವಲ್ಪವೂ ಯೋಚನೆ ಮಾಡದೇ ಕೇಳಿ ಪಡೆಯುತ್ತಾರೆ. ಆದರೆ ನಾಯಿಗೆ ತುತ್ತು ಅನ್ನಕ್ಕೂ ಗತಿಯಿಲ್ಲದೆ ಬೀದಿಯಲ್ಲಿ ಬಿದ್ದು ಸಾಯುತ್ತಿವೆ.
ಸ್ವಾರ್ಥಿಯಾಗದೆ ಮೂಕ ಪ್ರಾಣಿ, ನಮ್ಮನ್ನು ಪ್ರೀತಿಸುವ ಪ್ರಾಣಿಯಾದ ನಾಯಿಗೆ ಬೆಲೆ ಕೊಡಬೇಕು. ಯಾವುದೇ ಕಲ್ಮಶವಿಲ್ಲದ ನಿಷ್ಕಲ್ಮಶ ಮುಗ್ದತೆಗೆ ಬೆಲೆ ಕೊಡುವುದು ಅತ್ಯಂತ ಮಾನವೀಯತೆಯ ಕಾರ್ಯಗಳಲ್ಲಿ ಒಂದಾಗಿದೆ. ಈ ಮಾನವೀಯ ಕಾರ್ಯವನ್ನು ಮೆರೆಯೋಣ, ನಿಷ್ಕಲ್ಮಶ ಪ್ರೀತಿಗೆ ಋಣಿಯಾಗೋಣ.
ಪಶು ಇಲಾಖೆ ನಿರ್ಲಕ್ಷ್ಯ, ಜಾಗೃತಿ ಕೊರತೆ?!
ಪಶು ಇಲಾಖೆ ನಾಯಿಗಳ ಮಾರಣ ಹೋಮ ನಡೆಯುತ್ತಿದ್ದರೂ ಗಮನಿಸುತ್ತಿಲ್ಲ. ನಾಯಿ ಗರ್ಭಧಾರಣೆ ನಿರೋಧಕ ಮಾತ್ರೆ, ಔಷದಿ ವಿತರಣೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿ ವರ್ಷ ಈ ಸಮಸ್ಯೆ ಮಾಮೂಲಿ.
ಬೀದಿ ಮೇಲೆ ನಾಯಿಮರಿಗಳನ್ನು ಬಿಡದಂತೆ ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ಈ ಮೂಲಕ ಮನವಿ ಮಾಡಿದೆ. ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ.