ಹಸು ಖರೀದಿಗೆ 58,500 ರೂಪಾಯಿ ಸಹಾಯಧನ.!
– ಕೂಡಲೇ ಅರ್ಜಿ ಸಲ್ಲಿಸಿ..!
– ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನ.25
NAMMUR EXPRESS NEWS
ಪಶುಪಾಲನಾ ಇಲಾಖೆಯಿಂದ ಮಿಶ್ರತಳಿ ಹಸು ಖರೀದಿಗೆ 58,500 ರೂ. ಸಹಾಯದನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಹಾಯಧನ ಪಡೆಯಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಸಮಗ್ರ ಮಾಹಿತಿ ಇಲ್ಲಿದೆ.. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮಿಶ್ರತಳಿ ಹಸು ಖರೀದಿಗೆ ತಲಾ 58,500 ರೂಪಾಯಿ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಡಿ, ವಿಶೇಷ ಘಟಕ ಯೋಜನೆ (ಎಸ್ಸಿಪಿ) ಮತ್ತು ಗಿರಿಜನ ಉಪ (ಟಿಎಸ್ಪಿ) ಯೋಜನೆಯಡಿ ಈ ಸಹಾಯಧನ ನೀಡಲಾಗುತ್ತಿದೆ.
ಘಟಕವೆಚ್ಚ ಎಷ್ಟು? :
ಒಂದು ಮಿಶ್ರ ತಳಿ ಹಸು ಘಟಕದ ವೆಚ್ಚ 65,000 ರೂಪಾಯಿ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.90ರಷ್ಟು ಅಂದರೆ 58,500 ರೂಪಾಯಿ ಸಹಾಯಧನ ಸಿಗಲಿದೆ. ಉಳಿದ ಶೇ.10ರಷ್ಟು ಅಂದರೆ 6500 ರೂಪಾಯಿ ಫಲಾನುಭವಿಗಳ ವಂತಿಗೆ ಅಥವಾ ಬ್ಯಾಂಕಿನ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಯಾರು ಅರ್ಹರು? :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಆಸಕ್ತರು ಈ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಮಹಿಳೆಯರಿಗೆ ಶೇ.3.3ರಷ್ಟು ಮತ್ತು ಅಂಗವಿಕಲರಿಗೆ ಶೇ.3ರಷ್ಟು ಆದ್ಯತೆ ನೀಡಲಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು? :
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 2023-24ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಡಿ, ವಿಶೇಷ ಘಟಕ ಯೋಜನೆ (ಎಸ್ಸಿಪಿ) ಮತ್ತು ಗಿರಿಜನ ಉಪ (ಟಿಎಸ್ಪಿ) ಯೋಜನೆಯಡಿ ಮಿಶ್ರತಳಿ ಹಸು ಘಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅರ್ಹ ಫಲಾನುಭವಿಗಳು ಆಯಾ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ ಕಚೇರಿಗೆ ಭೇಟಿ ಮಾಡಿ, ಯೋಜನೆ ಲಭ್ಯವಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕ:
ಹಲವು ದಿನಗಳಿಂದ ಸದರಿ ಯೋಜನೆಯಡಿ ಹಸು ಖರೀದಿ ಸಹಾಯಧನ ವಿತರಣೆ ಅರ್ಜಿ ಆಹ್ವಾನಿಸಲಾಗಿದ್ದು; ಇದೇ ನವೆಂಬರ್ 25, 2023 ಅರ್ಜಿ ಅಲ್ಲಿಸಲು ಕೊನೆಯ ದಿನವಾಗಿದೆ. ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ 2ರ ವರೆಗೂ ಅವಕಾಶವಿದೆ. ಅರ್ಹ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.