ಮದುವೆಯಾಗಬೇಕಾ? ಉಚಿತ ಮಾಂಗಲ್ಯ ಭಾಗ್ಯ ಯೋಜನೆ..!
– ಮದುವೆಗೆ 60,000 ರೂಪಾಯಿ ಸಹಾಯಧನ
– ಏನಿದು ಯೋಜನೆ.. ಯಾರು ಮದುವೆ ಆಗಬಹುದು?
NAMMUR EXPRESS NEWS
ಮಾಂಗಲ್ಯಭಾಗ್ಯ ಯೋಜನೆಯಡಿ ರಾಜ್ಯ ಸರಕಾರವೇ ವಿವಾಹವಾಗುವ ಎಲ್ಲಾ ವರ್ಗದ ವಧು-ವರರಿಗೆ 60,000 ನಗದು ಸಹಾಯಧನ ನೀಡುತ್ತದೆ. ಹೆಸರು ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಾಪ್ತವಯಸ್ಕ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಅನ್ನಭಾಗ್ಯದಂತೆ ‘ಮಾಂಗಲ್ಯ ಭಾಗ್ಯ’ ಹೆಸರಿನಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ರಾಜ್ಯ ಸರಕಾರ ಆಯೋಜಿಸಿದೆ. ಮದುವೆಗಾಗುವ ದುಂದು ವೆಚ್ಚವನ್ನು ತಪ್ಪಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗಗಳನ್ನು ಸಾಲಮುಕ್ತರನ್ನಾಗಿಸಲು ಮುಜರಾಯಿ ಇಲಾಖೆ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಏನಿದು ಮಾಂಗಲ್ಯಭಾಗ್ಯ ಯೋಜನೆ?:
ಇದೊಂದು ಸರಕಾರವೇ ನಡೆಸಿಕೊಡುವ ಸರಳ ಸಾಮೂಹಿಕ ವಿವಾಹ ಯೋಜನೆಯಾಗಿದೆ. 2020ರ ಜನವರಿ 10ರಂದು ‘ಸಪ್ತಪದಿ’ ಹೆಸರಿನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದೀಗ ಹಾಲಿ ಕಾಂಗ್ರೆಸ್ ಸರಕಾರ ‘ಸಪ್ತಪದಿ’ ಬದಲು ‘ಮಾಂಗಲ್ಯ ಭಾಗ್ಯ’ ಎಂದು ಹೆಸರು ಬದಲಿಸಿ, ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಯೋಜನೆಯನ್ನು ರಾಜ್ಯದ ಎಲ್ಲಾ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಡಿ ರಾಜ್ಯದಲ್ಲಿ 34,563 ದೇವಾಲಯಗಳಿದ್ದು; ಇವುಗಳಲ್ಲಿ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಮಾಂಗಲ್ಯಭಾಗ್ಯ ವಿವಾಹ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ.
ವಿವಾಹಗಳು ಯಾವ ದಿನಾಂಕದ೦ದು ನಡೆಯಲಿವೆ?:
2023ರ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಗಳು ನೆರವೇರುತ್ತಿವೆ. ಈಗಾಗಲೇ ನವೆಂಬರ್ 16, 19 ಮತ್ತು 29ರಂದು ಹಾಗೂ ಡಿಸೆಂಬರ್ 7, 10ರಂದು ವಿವಿಧ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳು ನೆರವೇರಿವೆ. ಅದೇ ರೀತಿ ಬರಲಿರುವ 2024ರ ಜನವರಿ 28 ಮತ್ತು 31ರಂದು ಮತ್ತೊಂದು ಸುತ್ತಿನ ವಿವಾಹ ಮಹೋತ್ಸವಕ್ಕೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಸಹಾಯಧನ ಮತ್ತು ಸೌಲಭ್ಯ ಏನೇನು?
ಸರ್ಕಾರದ ಈ ಉಚಿತ ಯೋಜನೆ ವಿವಾಹ ಕಾರ್ಯಕ್ರಮದಲ್ಲಿ ಪ್ರತಿ ನವಜೋಡಿಗೆ ಅಗತ್ಯತೆಗೆ ಅನುಗುಣವಾಗಿ ಪ್ರೋತ್ಸಾಹಧನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು; ಆ ವಿವರ ಈ ಕೆಳಗಿನಂತಿದೆ:
– ವರನಿಗೆ ಹೂವಿನ ಹಾರ ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5,000 ರೂಪಾಯಿ
– ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10,000 ರೂಪಾಯಿ
– ವಧುವಿಗೆ ಎರಡು ಚಿನ್ನದ ತಾಳಿ, ಒಂದು ಗುಂಡುಗಳಿಗೆ 45,000 ರೂಪಾಯಿ
– ಉಚಿತ ಪ್ರೋತ್ಸಾಹಧನವನ್ನು ವಿವಾಹವಾಗುವ ಜೋಡಿಗಳಿಗೆ ಒಟ್ಟು 60,000 ರೂಪಾಯಿ ನೀಡಲಾಗುತ್ತದೆ.
– ಈ ವಿವಾಹಕ್ಕೆ ಆಗಮಿಸುವ ವಧು-ವರರು, ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ.