ದೀಪಾವಳಿ ಹಬ್ಬ: ಯಾವತ್ತು ಏನೇನು..?
– ಹಬ್ಬದ ದಿನಗಳು, ಮುಹೂರ್ತ, ವಿಶೇಷತೆಗಳು
– ದೀಪಾವಳಿ ಲಕ್ಷ್ಮಿ ಪೂಜೆ.. ಗೋ ಪೂಜೆ…!
NAMMUR EXPRESS NEWS
ಬೆಳಕಿನ ಹಬ್ಬ ಇನ್ನೇನು ಬಂತು. ಕೆಡುಕಿನ ಮೇಲೆ ಒಳಿತಿನ ವಿಜಯ, ಕತ್ತಲೆಯ ಮೇಲೆ ಬೆಳಕಿನ ವಿಜಯ ಎಂದೆಲ್ಲಾ ಹೇಳುವ ಈ ಹಬ್ಬದ ಆಚರಣೆಯ ಹಿಂದೆ, ಬದುಕಿನ ತಮವನ್ನು ಕಳೆದು ಜ್ಯೋತಿ ಹರಡಲಿ ಎಂಬ ಆಶಯ ಇದ್ದೇ ಇದೆ. ಬೆಳಕನು ಚೆಲ್ಲುತ್ತಾ ಬರುವ ಈ ಹಬ್ಬದ ದಿನಗಳು ಈ ಬಾರಿ ಎಂದಿನಿಂದ ಪ್ರಾರಂಭ, ಆಯಾ ದಿನಗಳ ವಿಶೇಷತೆ ಏನು ಎಂಬ ಇತ್ಯಾದಿ ಮಾಹಿತಿಗಳು ಇಲ್ಲಿವೆ. ನವೆಂಬರ್ 12ರಿಂದ ದೀಪಾವಳಿ ಹಬ್ಬ ಪ್ರಾರಂಭವಾಗುತ್ತದೆ. ಮೂರು ದಿನಗಳ ಹಬ್ಬದ ಆಚರಣೆಯ ಪದ್ಧತಿಯ ಪ್ರಕಾರ ಹೇಳುವುದಾದರೆ, ನವೆಂಬರ್ 12ನೇ ದಿನ, ಭಾನುವಾರ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ. ಪೂಜೆಯ ಮುಹೂರ್ತವು ಸಂಜೆ 5.39ರಿಂದ 7.35ರವರೆಗಿದೆ. ಪ್ರದೋಷ ಕಾಲವು ಸಂಜೆ 5.29ರಿಂದ 8.08ರವರೆಗೆ ಇರುತ್ತದೆ. 13ರಂದು ಅಮಾವಾಸ್ಯೆ. 14ರಂದು ಬಲಿಪಾಡ್ಯಮಿ.
ಕೆಲವೆಡೆ ನ.10ರಿಂದಲೇ ಸಂಭ್ರಮ
ಐದು ದಿನಗಳ ದೀಪಾವಳಿ ಆಚರಿಸುವ ಪ್ರಾಂತ್ಯಗಳಲ್ಲಿ, ನವೆಂಬರ್ 10 ರಿಂದಲೇ ದೀಪಗಳ ಸಂಭ್ರಮ ಆರಂಭವಾಗುತ್ತದೆ. ಮೊದಲನೇ ದಿನ ಧನ್ ತೆರಾಸ್ ಆಚರಿಸುವವರು, ಹೊಸದಾಗಿ ವಸ್ತುಗಳು, ಆಭರಣ, ಆಸ್ತಿಯನ್ನು ಖರೀದಿಸುವ ಸಂಪ್ರದಾಯವಿದೆ. ಅಂದು ಕೊಂಡಿದ್ದು 13 ಪಟ್ಟು ಹೆಚ್ಚುತ್ತದೆ ಎನ್ನುವುದು ಪ್ರತೀತಿ. ಸಂಜೆ 5.27ರಿಂದ 7.27ರವರೆಗಿನ ಸಮಯ ಈ ದಿನದ ಪೂಜೆಗೆ ಪ್ರಶಸ್ತ. ಮಾರನೇ ದಿನ, ಅಂದರೆ 11ನೇ ತಾರೀಕು ಛೋಟಿ ದಿವಾಲಿ, 12ರಂದು ಸಂಜೆ ಅಮಾವಾಸ್ಯೆಯ ಪ್ರದೋಷಕ್ಕೆ ಲಕ್ಷ್ಮೀ ಪೂಜೆ, 14ನೇ ತಾರೀಕು ಗೋವರ್ಧನ ಪೂಜೆಯ ಮುಹೂರ್ತ ಸಂಜೆ 5.54ರಿಂದ 8.09ರವರೆಗಿದೆ. ಐದನೇ ದಿನ, 15ಕ್ಕೆ ಅಣ್ಣ-ತಂಗಿಯರ ಹಬ್ಬವಾಗಿ ಭಾಯ್ ದೂಜ್ ಆಚರಿಸುತ್ತಾರೆ. ಅಂದು ಮಧ್ಯಾಹ್ನ 12.38ರಿಂದ 2.53ರವರೆಗಿನ ಸಮಯ ಪೂಜೆಗೆ ಸೂಕ್ತ ಎನ್ನಲಾಗಿದೆ.
ಸಿಹಿ ಹಂಚಿಕೆ
ಬಂಧು ಮಿತ್ರರಿಗೆ ಸಿಹಿ ಹಂಚುವುದು, ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತದೆ. ಕತ್ತಲೆಯ ರಾತ್ರಿಗಳನ್ನು ಬೆಳಗಿಸುವಂಥ ಹಣತೆಗಳು, ಆಕಾಶಬುಟ್ಟಿಗಳು ಲೋಕವನ್ನೆಲ್ಲ ಬೆಳಗುವಂತೆ ಭಾಸವಾಗುತ್ತದೆ. ಇವೆಲ್ಲವುಗಳ ನಡುವೆ ಉಮೇದುವಾರರ ಪಟಾಕಿಗಳು ಶಬ್ದ ಮಾಡುತ್ತಿರುತ್ತವೆ. ಹಲವು ತಿಂಗಳುಗಳಿಂದ ನಡೆದು ಬರುತ್ತಿದ್ದ ಹಬ್ಬಗಳ ಸಾಲಿಗೊಂದು ಬೆಳಕಿನ ಸಮಾರೋಪದಂತೆ ದೀಪಾವಳಿ ಕಂಗೊಳಿಸುತ್ತದೆ.
ಕರಾವಳಿಯಲ್ಲಿ ಆಚರಣೆ
ಶ್ರೀಕೃಷ್ಣ ಮಠ ಸೇರಿದಂತೆ ವಿವಿಧ ಕಡೆಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಈ ಕೆಳಗಿನಂತಿದೆ
ನ 11ರಂದು ಯಮದೀಪ, ನೀರು ತುಂಬುವ ಹಬ್ಬ
ನ. 12ರ ಬೆಳಗ್ಗೆ 5.22ಕ್ಕೆ ತೈಲಭ್ಯಂಗ ಎಣ್ಣೆ ಹಚ್ಚಿ ಸ್ನಾನ, ಸಂಜೆ ಗದ್ದೆಗೆ ದೀಪ ಇಡುವುದು, ಬಲೀಂದ್ರ ಪೂಜೆ,
ನ. 13ರಂದು ಗೋಪೂಜೆ,
14ರಿಂದ ತುಳಸಿಪೂಜೆ ಆರಂಭ,
ಮೂಲ್ಕಿ ಶಾಂಭವಿ ನದಿಯ ದಕ್ಷಿಣದಲ್ಲಿ ನ. 13ರ ಸಂಜೆ ಗದ್ದೆಗೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯಲಿದೆ.