ನಾಗರ ಪಂಚಮಿ ಹಬ್ಬ ಆಚರಿಸೋದು ಏಕೆ?
– ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬ ಅಂತ ಕರೆಯೋದು ಏಕೆ?
– ನಾಗರ ಹಾವು ದೇವರಾಗಿದ್ದು ಹೇಗೆ?
NAMMUR EXPRESS
ಹಿಂದೂ ಪುರಾಣದಲ್ಲಿ ಹತ್ತು ಹಲವು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬಗಳು ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಮಾಸದಲ್ಲಿ ಎಲ್ಲ ಹಬ್ಬಗಳಿಗೆ ಮುಂಚೂಣಿಯಂತೆ ಬರುವ ಹಬ್ಬವೇ ನಾಗರ ಪಂಚಮಿ.
ನಾಗರ ಪಂಚಮಿ ಹಬ್ಬ ಆದಮೇಲೆ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ದೀಪಾವಳಿ ಹೀಗೆ ನಾನಾ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ.
ನಾಗರ ಪಂಚಮಿ ಇತಿಹಾಸ ಏನು?
ನಾಗರ ಪಂಚಮಿ ಆಚರಣೆಗೆ ಸಂಬಂಧ ಪಟ್ಟ ಹಾಗೆ ಹಲವು ಪುರಾಣ ಪ್ರಸಿದ್ದ ಕಥೆಗಳ ಜೊತೆ ಜಾನಪದ ಕತೆಗಳು ಸಹ ಇವೆ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸದಂತೆ ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿ ಓಡಿ ಬಂದ ನಾಗರಹಾವುವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಆಗ ಕನ್ನಿಕೆ ಮನಸ್ಪೂರ್ತಿಯಾಗಿ ಒಪ್ಪಿ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಎದುರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ.
ನಾಗರ ಪಂಚಮಿ ಹಬ್ಬ ಹೆಣ್ಣು ಮಕ್ಕಳ ಹಬ್ಬ!
ನಾಗರ ಪಂಚಮಿ ಹಬ್ಬ ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ.ಅದರಲ್ಲೂ ಮದುವೆ ಅದ ಹೆಣ್ಣು ಮಕ್ಕಳಿಗೆ ಖುಷಿ ಯಾಕೆಂದರೆ ತವರಿನ ಉಡುಗೊರೆಗೆ ಹಾತೊರೆಯುತ್ತಿರುತ್ತಾರೆ. ಸಂಪ್ರದಾಯಿಕ ಉಡುಗೆ ತೊಟ್ಟು ನಾಗರ ಕಟ್ಟೆಗೆ ಹೋಗಿ ನಮಿಸಿ ಪೂಜೆ ಸಲ್ಲಿಸಿ ನಾಗನ ಕೃಪೆಗೆ ಪಾತ್ರರಾಗುತ್ತಾರೆ. ಸಂತಾನ ಇಲ್ಲದವರು ನಾಗ ದೇವರಲ್ಲಿ ಮೊರೆಯಿಡುತ್ತಾರೆ.
ನಾಗನ ಪೂಜೆ ಮಾಡುವ ಮೂಲಕ ಕೃಪೆಗೆ ಪಾತ್ರರಾಗುತ್ತಾರೆ. ಈ ನಾಗರ ಪಂಚಮಿ ಎಂದು ನಾಗನಿಗೆ ಪೂಜೆ ಸಲ್ಲಿಸಿದ್ದಾರೆ. ಅಣ್ಣನ ಆಯಸ್ಸು ಹೆಚ್ಚು ಆಗುತ್ತೆ ಎಂಬ ನಂಬಿಕೆ ಹೆಣ್ಣು ಮಕ್ಕಳದು.
ಆಚರಣೆ ಮಹತ್ವ ಏನು?
ಎಲ್ಲ ತರಹದ ಸಮಸ್ಯೆಗೆ ಪರಿಹಾರ ನಾಗರಾಧನೆ. ಪುರಾಣದ ನಂಬಿಕೆಯ ಪ್ರಕಾರ ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ರಾಹು, ಕೇತುಗಳಂತಹ ಗ್ರಹಗಳ ದುಷ್ಪರಿಣಾಮಗಳಿಂದ ವ್ಯಕ್ತಿಯನ್ನು ರಕ್ಷಿಸಬಹುದು. ಜೀವನದ ಸಂಕಷ್ಟಗಳನ್ನು ಕಡಿಮೆ ಮಾಡಲು ನಾಗಪಂಚಮಿಯ ದಿನದಂದು ಶಿವನಿಗೆ ರುದ್ರಾಭಿಷೇಕವನ್ನು ಅರ್ಪಿಸಿ, ಬೆಳ್ಳಿಯ ಸರ್ಪವನ್ನು ಜೋಡಿಯಾಗಿ ದೇವರಿಗೆ ಅರ್ಪಿಸಿದ್ದಾರೆ. ನಾಗ ದೋಷ ಪರಿಹಾರ ಆಗುತ್ತದೆ.
ನಾಗರ ಪಂಚಮಿಯ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ನಾಗ ದೇವರನ್ನು ಮನೆಯ ರಕ್ಷಕ ಎಂದೂ ಪೂಜಿಸುತ್ತಾರೆ .ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ – ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ನಂಬಿಕೆ ಇಲ್ಲಿನ ಜನರದು.
ಮೂಡನಂಬಿಕೆ ಆಗದಿರಲಿ.. ಹಾವುಗಳಿಗೆ ತೊಂದರೆ ಮಾಡದಿರಲಿ
ಆಚರಣೆ ಆಚರಣೆಯಾಗಿರಲಿ ಮೂಡನಂಬಿಕೆ ಆಗದಿರಲಿ ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡಿಯುವುದನ್ನು ತಪ್ಪಿಸಿ, ಹಾಲನ್ನು ಅತಿಯಾಗಿ ಹೆಚ್ಚು ಬಳಸಿ ವ್ಯರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿಬೇಕು. ಹಾಲು ಅರಶಿನವನ್ನು ಹಾವುಗಳಿಗೆ ಎರಚುವ ಮೂಲಕ ಹಾವುಗಳ ಜೀವಕ್ಕೆ ಕುತ್ತುತರುತ್ತಾರೆ. ನಮ್ಮ ಮೂಡನಂಬಿಕೆ ಮೂಕ ಜೀವಿಗಳ ಸಾವಿಗೆ ಕಾರಣ ಆಗಬೇಡಿ. ನಾಗರ ಪಂಚಮಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿ ನಾಗದೇವರ ಕೃಪೆಗೆ ಪಾತ್ರರಾಗಿ.
ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು.