ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು!
– ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳ ಬಂಧನ, 1.5ಲಕ್ಷ ಮೌಲ್ಯದ ಎಂಡಿಎಂಎ ವಶ
– ಬಂಟ್ವಾಳ: ಅರಣ್ಯ ಇಲಾಖೆ ಸಿಬ್ಬಂದಿ ಹಠಾತ್ ಕುಸಿದು ಬಿದ್ದು ಮೃತ್ಯು
NAMMUR EXPRESS NEWS
ಕುಂದಾಪುರ: ಬೆಳ್ವೆ ಸಮೀಪದ ಗುಮ್ಮೋಲ ಎಂಬಲ್ಲಿರುವ ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ. 1ರಂದು ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ ಆಚಾರ್ (13) ಹಾಗೂ ಜಯಂತ್ (14) ಎಂದು ಗುರುತಿಸಲಾಗಿದೆ. ಶ್ರೀಶ ಹೆಬ್ರಿಯ ಎಸ್ಆರ್ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ. ಬೆಳ್ವೆ ಸಮೀಪದ ಗೂಮ್ಮೋಲ ಚರ್ಚ್ ಹಿಂಭಾಗದಿಂದ ಕಜ್ಕೆ ಸಂತೆಕಟ್ಟೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟುವಿನ ಮೇಲ್ಭಾಗದಲ್ಲಿ ಶ್ರೀಶ ಆಚಾರ್, ಜಯಂತ್ ನಾಯ್ಕ್ ಸೇರಿದಂತೆ ನಾಲ್ಕು ಮಕ್ಕಳು ಈಜಲು ತೆರಳಿದ್ದರು ಎನ್ನಲಾಗಿದೆ. ಶ್ರೀಶ ನೀರಿನಲ್ಲಿ ಆಯ ತಪ್ಪುತ್ತಿದ್ದಂತೆ ರಕ್ಷಣೆಗೆ ಜಯಂತ್ ನೀರಿಗೆ ಧುಮುಕಿದ್ದು ಇಬ್ಬರು ನೀರು ಪಾಲಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಬೊಬ್ಬೆ ಹೊಡೆದಿದ್ದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮಕ್ಕಳ ಹುಡುಕಲು ಮುಂದಾದರು. ತಕ್ಷಣ ಶಂಕರನಾರಾಯಣ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಯಿತು. ನೀರಿನಲ್ಲಿ ಮುಳುಗಿದ್ದ ಮಕ್ಕಳನ್ನು ಹುಡುಕಲು ಸ್ಥಳೀಯರು ಪೊಲೀಸರಿಗೆ ಸಹಕರಿಸಿದ್ದು, ಕೆಲವೇ ಹೊತ್ತಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳ ಬಂಧನ, 1.5ಲಕ್ಷ ಮೌಲ್ಯದ ಎಂಡಿಎಂಎ ವಶ
ಉಳ್ಳಾಲ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಪಜೀರು ಎಂಬಲ್ಲಿ ನಿರ್ಜನ ಕೈಗಾರಿಕಾ ಪ್ರದೇಶದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಒಟ್ಟು 1.5ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಮೂಲದ ಕಿಂಗ್ ಪಿನ್ ಇಂದಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ಅಲ್ಪಾಝ್ ಯಾನೆ ಅಲ್ಪಾ ಪ್ಯಾಬ್ಲೊ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಕೋಕ್ ಪಾಟ್, ಸ್ವಿಝ್ ಡಿಜೈರ್ ಕಾರು, 2 ಮೊಬೈಲ್ ಸೇರಿ ಒಟ್ಟು 7,76,980/- ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಒಟ್ಟು ಪ್ರಕರಣದಲ್ಲಿ 103 ಗ್ರಾಂ ಎಮ್ ಡಿಎಮ್ಎ ಹಾಗೂ 15,52,980 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಕೋಣಾಜೆ ಪೊಲೀಸರು ಸತತವಾಗಿ ಡ್ರಗ್ ಪೆಡ್ಲರ್ ಗಳ ಬೆನ್ನು ಬೀಳುತ್ತಿದ್ದು ತಲಪಾಡಿಯ ಮರಿಯ ಚರ್ಚ್ ಕಂಪೌಂಡ್ ನಿವಾಸಿ ಗೌತಮ್, ಕುಂಪಲ ಹನುಮಾನ್ ದೇವಸ್ಥಾನ ಬಳಿಯ ನಿವಾಸಿ ಕಾರ್ತಿಕ್, ತೊಕ್ಕೊಟ್ಟು ಗಣೇಶ ನಗರದ ಗಣೇಶ ಮಂದಿರದ ಬಳಿ ನಿವಾಸಿ ನಿಖಿಲ್ ಎಂಬ ಮೂವರನ್ನು ಬಂಧಿಸಿ 1.50,000/- ಅಂದಾಜು ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಕೃತ್ಯಕ್ಕೆ ಬಳಸಿದ್ದ ಬೆಲೆನೋ ಕಾರು, 3 ಮೊಬೈಲ್ ಫೋನ್ಗಳು,ಡಿಜಿಟಲ್ ತೂಕ ಮಾಪನ ಹಾಗೂ ಗಾಜಿನ ನಳಿಕೆ ಸೇರಿದಂತೆ 7.76,980/- ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದರು. ಸದ್ಯ ಮತ್ತೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಡ್ರಗ್ ಪೂರೈಕೆ ಮಾಡುತ್ತಿದ್ದ ಕಿಂಗ್ ಪಿನ್ ಮೊಹಮ್ಮದ್ ಅಲ್ಪಾಝ್ ನನ್ನು ಹೆಡೆಮುರಿ ಕಟ್ಟಿದ್ದಾರೆ.
* ಬಂಟ್ವಾಳ: ಅರಣ್ಯ ಇಲಾಖೆ ಸಿಬ್ಬಂದಿ ಹಠಾತ್ ಕುಸಿದು ಬಿದ್ದು ಮೃತ್ಯು
ಬಂಟ್ವಾಳ: ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದ ವೀರಕಂಭ ನಿವಾಸಿ ಜಯರಾಮ ಮೂಲ್ಯ ಕರ್ತವ್ಯನಿರತರಾಗಿದ್ದ ಸಂದರ್ಭ ಕಚೇರಿಯಲ್ಲಿ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಬಿಸಿ ರೋಡಿನಲ್ಲಿ ನಡೆದಿದೆ. ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ಒಬ್ಬನೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಬೆಳಿಗ್ಗೆ ಸುಮಾರು 6.30 ವರೆಯವರೆಗೂ ಇಲಾಖೆಯ ಬಾಗಿಲು ಮುಚ್ಚಿಕೊಂಡಿದ್ದನ್ನು ಕಂಡು ಇಲಾಖೆಯ ಚಾಲಕ ಕಿಟಕಿ ಬಾಗಿಲು ತೆರದು ನೋಡಿದಾಗ ಜಯರಾಮ ಅವರು ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.