ಕರಾವಳಿ ಟಾಪ್ ನ್ಯೂಸ್
– ವಿಟ್ಲ: ಇಡಿ ಅಧಿಕಾರಿಗಳ ಹೆಸರಲ್ಲಿ 30 ಲಕ್ಷ ದೋಚಿ ಪರಾರಿ!
– ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಜೀವಾವಧಿ ಶಿಕ್ಷೆ
– ಮಂಗಳೂರು: ಗಾಂಜಾ ಮಾರಾಟ – ಇಬ್ಬರು ಅರೆಸ್ಟ್!
NAMMUR EXPRESS NEWS
ಮಂಗಳೂರು: ಬಾಲಿವುಡ್ ಸಿನೆಮಾ ಸ್ಪೆಷಲ್ 26 ಮಾದರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ತಂಡವೊಂದು ಬರೋಬ್ಬರಿ 30 ಲಕ್ಷ ಲೂಟಿ ಮಾಡಿದೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಸಿಂಗಾರಿ ಬೀಡಿ ಸಂಸ್ಥೆ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಜ. 3ರಂದು ಅವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡವೊಂದು ದಿಡೀರ್ ದಾಳಿ ನಡೆಸಿ ಇಡಿ ಅಧಿಕಾರಿಗಳು ‘ ಎಂದು ನಂಬಿಸಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿಂಗಾರಿ ಬೀಡಿ ಸಂಸ್ಥೆಯ ಮಾಲಕ ಬೋಳಂತೂರು ಸಮೀಪದ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಮನೆಯಲ್ಲಿ ಕೃತ್ಯ ನಡೆದಿದೆ.
ಮೂಲಗಳ ಪ್ರಕಾರ ಜ. 3ಕ್ಕೆ ತಡರಾತ್ರಿ 7 ಜನರ ತಂಡ ಮಾರುತಿ ಕಾರಿನಲ್ಲಿ ಬಂದು ಸುಲೈಮಾನ್ ಅವರ ಮನೆಯ ಕದ ತಟ್ಟಿದ್ದಾರೆ. ತಮ್ಮನ್ನು ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಈ ಖದೀಮರು, ತಮ್ಮ ಆಸ್ತಿ ಹಾಗೂ ಬ್ಯಾಂಕ್ ವಹಿವಾಟಿನ ಲೆಕ್ಕ ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಇದಲ್ಲದೇ ತನಿಖೆಗೆ ಸಹಕರಿಸದಿದ್ದರೇ, ಬಂಧಿಸುವುದಾಗಿ ಹೆದರಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಈ ತಂಡ ತನಿಖೆಯ ನಾಟಕವಾಡಿದೆ. ಮುಂಜಾನೆ ಸಮಯ ಅವರು ಮನೆಯಿಂದ ಸುಮಾರು 30 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಕಾರಿನಲ್ಲಿ ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ. ಇವರು ಹಿಂದಿ ಇಂಗ್ಲೀಷ್ ಹಾಗೂ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
* ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಅವಳಿ ಜೀವಾವಧಿ ಶಿಕ್ಷೆ
ಕಾಸರಗೋಡು: ಪೆರಿಯ ಕಲ್ಯೋಟ್ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಮಂದಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಿ ಕೊಚ್ಚಿಯ ಪ್ರತ್ಯೇಕ ಸಿಬಿಐ ನ್ಯಾಯಾಲಯವು ತೀರ್ಪನ್ನು ನೀಡಿದೆ. ಹಾಗೂ ಉಳಿದ ನಾಲ್ವರಿಗೆ ಐದು ವರ್ಷ ಸಜೆ, ತಲಾ 10 ಸಾವಿರ ರೂ. ದಂಡವನ್ನು ವಿಧಿಸಿದೆ.
ಫೆ.2,2023 ರಂದು ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. 292 ಮಂದಿ ಸಾಕ್ಷಿಗಳ ಪೈಕಿ 154 ಮಂದಿಯ ವಿಚಾರಣೆ ನಡೆದಿದ್ದು 20 ತಿಂಗಳ ನಂತರ ತೀರ್ಪು ಬಂದಿದೆ.
* ಮಂಗಳೂರು: ಗಾಂಜಾ ಮಾರಾಟ – ಇಬ್ಬರು ಅರೆಸ್ಟ್
ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ದಕ್ಷಿಣ ಉಪವಿಭಾಗದ ಮಾದಕ ದ್ರವ್ಯ ನಿಗ್ರಹ ತಂಡ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳನ್ನು ಮೂಡ ಗ್ರಾಮದ ಮೊಹಮ್ಮದ್ ಅಸಿಫ್ (34), ನಿಯಾಜ್(40) ಎಂದು ಗುರುತಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯ ಪಿಲಿಕುಳದ ಬಳಿಯಿರುವ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್ ಬಳಿ ಆರೋಪಿಗಳು ಗಾಂಜಾ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹಲವರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತರಿ0ದ ಸುಮಾರು 958 ಗ್ರಾಂ ಗಾಂಜಾ, ಮೊಬೈಲ್ ಫೋನ್ ಸ್ವಾಧೀನ ಪಡಿಸಿಲಾಗಿದೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಅವರ ಮಾರ್ಗದರ್ಶದಂತೆ , ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್ ಐಪಿಎಸ್, ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಕೆ ರವಿಶಂಕರ್ ನಿದೇರ್ಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕರವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಕೆ.ಆರ್ ಶಿವಕುಮಾರ್, ಪಿಎಸ್ಐ ಅರುಣ್ ಕುಮಾರ್ ಡಿ. ಮತ್ತು ಮಾದಕ ದ್ರವ್ಯ ನಿಗ್ರಹ ತಂಡದ ಪಿಎಸ್ಐ ಪುನೀತ್ ಹಾಗೂ ಸಿಬ್ಬಂದಿಯವರಾದ ಸಾಜುನಾಯರ್, ಮಹೇಶ್, ಅಕ್ಬರ್ ಮತ್ತು ತಿರುಮಲೇಶ್ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.