ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣ: ಗೃಹಿಣಿ ಚಿಕಿತ್ಸೆ ಫಲಿಸದೇ ಮೃತ್ಯು
– ಸೋಮೇಶ್ವರ ಕಡಲಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
– ಮಂಗಳೂರು: ಮಾದಕ ಪದಾರ್ಥ ಸೇವಿಸಿದ ಆರೋಪ, 8 ಮಂದಿ ಬಂಧನ
– ಮಂಗಳೂರು: ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಮೃತ್ಯು
NAMMUR EXPRESS NEWS
ಮಂಗಳೂರು: ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಖಂಡಿಕ ಎಂಬಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಆಕಸ್ಮಿಕ ಬೆಂಕಿ ಸಂಭವಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮಕ್ಕಳ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಡಿ. 12ರ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಹೌದು, ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಪತ್ನಿ ಖುಬ್ರ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಕಳೆದ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಿಂದ ಈ ದುರಂತ ಸಂಭವಿಸಿತ್ತು. ಇದರಿಂದ ಮನೆಯೊಡತಿ ಖುಬ್ರಾ ಹಾಗೂ ಅವರ ಮೂವರು ಮಕ್ಕಳಾದ ಅದಿಯಾ, ಮಝಿಯಾ, ಮಾಯಿದಾ ಗಂಭೀರ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆ (ಮಂಗಳೂರು) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮನೆಯೊಡತಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಡಿ. 12ಕ್ಕೆ ತಡರಾತ್ರಿ ಮೃತಪಟ್ಟಿದ್ದಾರೆ
* ಸೋಮೇಶ್ವರ ಕಡಲಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮಂಗಳೂರು : ವ್ಯಕ್ತಿಯೊಬ್ಬ ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್, ಚಪ್ಪಲ್, ಕೂಲಿಂಗ್ ಗ್ಲಾಸ್ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಮಂಗಳೂರಿನ ಹೊಸ ಪಿಜ್ಜಾ ರೆಸ್ಟೋರೆಂಟ್ ಮೃತರನ್ನು ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಎಂದು ಗುರುತಿಸಲಾಗಿದೆ.
ಉದಯ್ ಅವರು ಸೋಮೇಶ್ವರ ಸೋಮನಾಥ ಕ್ಷೇತ್ರದ ಮುಂದುಗಡೆ ತನ್ನ ಆಕ್ಟಿವಾ ಸ್ಕೂಟರನ್ನ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದಾರೆ.
ರುದ್ರಪಾದೆಯಲ್ಲಿ ಪರ್ಸ್, ಚಪ್ಪಲ್, ಕೂಲಿಂಗ್ ಗ್ಲಾಸನ್ನ ಬಿಟ್ಟು ನಾಪತ್ತೆಯಾಗಿದ್ದರು. ಬೀಚಲ್ಲಿ ಸುತ್ತಾಡುತ್ತಿದ್ದ ಹುಡಗನೋರ್ವನು ರುದ್ರಪಾದೆಯಲ್ಲಿದ್ದ ಪರ್ಸನ್ನು ಸ್ಥಳೀಯ ಗೂಡಂಗಡಿ ಮಾಲಕರಲ್ಲಿ ನೀಡಿದ್ದಾನೆ. ಗೂಡಂಗಡಿ ಮಾಲೀಕರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಉದಯ್ ಅವರನ್ನು ಹುಡುಕಿದ್ದಾರೆ. ಸೋಮೇಶ್ವರ ಕಡಲ ಕಿನಾರೆಯ ಅಲಿಮಕಲ್ಲು ಎಂಬಲ್ಲಿ ಉದಯ್ ಅವರ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಶವವನ್ನ ಎಳೆದು ಮೇಲಕ್ಕೆ ಹಾಕಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
* ಮಂಗಳೂರು: ಮಾದಕ ಪದಾರ್ಥ ಸೇವಿಸಿದ ಆರೋಪ, 8 ಮಂದಿ ಬಂಧನ
ಮಂಗಳೂರು: ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಪದಾರ್ಥ ಸೇವಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ. ಕೇರಳ ಕಾಞಂಗಾಡ್ನ ನಮೃತ್(20), ಕೊಲ್ಲಂನ ಜೋನೆ ಅಲೆಕ್ಸ್ ಜಾರ್ಜ್(19), ಬಿಜೈ ಕಾಪಿಕಾಡ್ನ ಶಮಿತ್ ಕುಮಾರ್(21), ಮಂಗಳೂರು ಕಣ್ಣೂರಿನ ಸಿದ್ದೀಕ್(42), ಕೋಲಾಡಿಯ ಅಭಿನ್ಕೆ.ಬಿ(19), ಪುರಪಿಲ್ಲಿಯ ನವನೀತ್ ಪಿ.ಎಂ(19), ಪಣಂಬೂರಿನ ತಾಲೀಮ(26) ಮತ್ತು ಕಸ್ಬಾ ಬೆಂಗ್ರೆಯ ಸಾದಾತ್(27) ಬಂಧಿತ ಆರೋಪಿಗಳು.ಇವರ ವಿರುದ್ಧ ಎನ್ಡಿಪಿಎಸ್ ಆ್ಯಕ್ಟ್ ಕಲಂ 27(ಬಿ) ನಂತೆ ಪ್ರಕರಣ ದಾಖಲಾಗಿದೆ.
* ಮಂಗಳೂರು: ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಮೃತ್ಯು
ಮಂಗಳೂರು: ಕಾಲ್ನಡಿಗೆ ಜಾಥಾದ ವೇಳೆ ವಿಶ್ರಾಂತಿ ಪಡೆಯುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ಐವರು ವಿರಾಮದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಗುಜರಾತ್ ನ ಸೂರತ್ ನಿಂದ 200 ಕಿ.ಮಿ. ದೂರದಲ್ಲಿ ಮಧ್ಯಾಹ್ನ 2ರ ಸುಮಾರಿಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ.