ಕರಾವಳಿ ಟಾಪ್ ನ್ಯೂಸ್
– ಮೂಡಬಿದ್ರೆ: ಅಂಗಡಿ ಕಳ್ಳರಿದ್ದಾರೆ ಎಚ್ಚರಿಕೆ!
– ಕಾರ್ಕಳ: ಕಾಡು ಪ್ರಾಣಿಗಳ ಬೇಟೆ, ಓರ್ವನ ಬಂಧನ
– ಕುಂದಾಪುರ: ಡ್ರೈವರ್ ಇಲ್ಲದೆ ಬಸ್ಸೊಂದು ಚಲಿಸಿ ಕಾರೊಂದಕ್ಕೆ ಢಿಕ್ಕಿ
NAMMUR EXPRESS NEWS
ಮೂಡಬಿದ್ರೆ : ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗೂಡಂಗಡಿಗೆ ನುಗ್ಗಿದ ಕಳ್ಳರು ಹಣ ಹಾಗೂ ಸುಮಾರು ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ನೀಡ್ಡೋಡಿ ನಿವಾಸಿ ರೋಷನ್ ವಿಲ್ಸನ್ ಕ್ವಾಡ್ರಸ್, ಕೊಂಪಪದವು ಸಾಂತ್ರಬೈಲ್ ನಿವಾಸಿ ನಿಶಾಂಕ್ ಪೂಜಾರಿ, ತೆಂಕ ಎಕ್ಕಾರು ನಿರೋಡೆ ನಿವಾಸಿ ರೋಹಿತ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಈ ಮೂವರು ಕಳ್ಳರು ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಎಂಬಲ್ಲಿರುವ ಜಯಶ್ರೀ ಸ್ಟೊರ್ಸ್ ಎಂಬ ಗೂಡಂಗಡಿಗೆ ಜನವರಿ 9ರಂದು ರಾತ್ರಿ ಮೇಲ್ಮಾವಣಿಯ ಸೀಟ್ ನ್ನು ತೆಗೆದು, ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಸುಮಾರು 20000 ರೂ ನಗದು ಮತ್ತು, ಸುಮಾರು 48000 ರೂ ಮೌಲ್ಯದ ಸಿಗರೇಟು, ತಿಂಡಿ, ನೀರು ಬಾಟಲ್, ಕೊಲ್ಡ್ ಡ್ರಿಂಕ್ಸ್, ಚಾಕೊಲೇಟ್, ಮಿಕ್ಸರ್, ಬಿಸ್ಕೆಟ್ ಇತ್ಯಾದಿ ವಸ್ತುಗಳನ್ನು ದೋಚಿದ್ದರು. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳು ಮುಲ್ಕಿ, ಬಜಪೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳಿಂದ 25 ಕ್ಕೂ ಹೆಚ್ಚು ಗೂಡಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್ ಮತ್ತು, 5000 ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ, 3.55,000 ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೊಯಲ್, ಡಿಸಿಪಿ ರವಿಶಂಕರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ ಎಸಿಪಿ ಶ್ರೀಕಾಂತ್ ಕೆ ರವರ ನಿರ್ದೇಶನದಂತೆ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ನವೀಸ್ ಪಿ.ಎಸ್.ಐ, ರಾಜೇಶ್ ಎ ಎಸ್ ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೈನ್ ಅಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
* ಕಾರ್ಕಳ: ಕಾಡು ಪ್ರಾಣಿಗಳ ಬೇಟೆ, ಓರ್ವನ ಬಂಧನ
ಕಾರ್ಕಳ : ಕಾಡುಪ್ರಾಣಿಗಳನ್ನು ಬೇಟೆಯಾಡುವ ಕಳ್ಳ ಬೇಟೆಗಾರರ ಯತ್ನವನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ವಿಫಲಗೊಳಿಸಿದ್ದು, ಒಬ್ಬ ಸಿಕ್ಕಿಬಿದ್ದ ಘಟನೆ ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.ಕಾಟಿಪಳ್ಳ ನಿವಾಸಿ ಪಾಸ್ವಿಮ್ ಅಲಿ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಅರಣ್ಯ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಅರಣ್ಯಾಧಿಕಾರಿಗಳು ಗುಂಪಿನ ಮೇಲೆ ದಾಳಿ ನಡೆಸಿದಾಗ ಸುಮಾರು ಐದರಿಂದ ಆರು ಮಂದಿ ರೈಫಲ್ನೊಂದಿಗೆ ಶಸ್ತ್ರಸಜ್ಜಿತರಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಕಾರಿನಲ್ಲಿ ಕಾಯುತ್ತಿದ್ದರು. ಕಾಟಿಪಳ್ಳ ನಿವಾಸಿ ಪಾಸ್ವಿಮ್ ಅಲಿ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಇತರರು ಕಾರು ಮತ್ತು ಗನ್ ನೊಂದಿಗೆ ಪರಾರಿಯಾಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ. ಶಂಕರನಾರಾಯಣ ಅರಣ್ಯ ಪ್ರದೇಶದಲ್ಲಿ ಎರಡು ಕಾಡೆಮ್ಮೆಗಳನ್ನು ಬೇಟೆಯಾಡಿದ ಆರೋಪ ಪಾಸ್ವಿಮ್ ಅಲಿ ಮೇಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರ ವಿರುದ್ಧ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸಿದ ಆರೋಪ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
* ಕುಂದಾಪುರ: ಡ್ರೈವರ್ ಇಲ್ಲದೆ ಬಸ್ಸೊಂದು ಚಲಿಸಿ ಕಾರೊಂದಕ್ಕೆ ಢಿಕ್ಕಿ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಹಂಗಳೂರಿನ ಖಾಸಗಿ ಬಸ್ ವರ್ಕ್ ಶಾಪ್ ವೊಂದರಲ್ಲಿ ಡ್ರೈವರ್ ಇಲ್ಲದೆ ಬಸ್ಸೊಂದು ಚಲಿಸಿ ಕಾಂಪ್ಲೆಕ್ಸ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಢಿಕ್ಕಿಹೊಡೆದ ಘಟನೆ ಜ13ರಂದು ಸೋಮವಾರ ಬೆಳಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಾರು ಮತ್ತು ಬಸ್ ನ ಮುಂಭಾಗ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಹಾರಿ ಬಸ್ ಚಲಿಸಿದ್ದು ಆತಂಕಕ್ಕೆ ಕಾರಣವಾಗಿ, ಈ ಘಟನೆ ಜನರಲ್ಲಿ ಅಚ್ಚರಿಯನ್ನೂ ಮೂಡಿಸಿತು.ಈ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.