– ಚಾಲಕನ ನಿರ್ಲಕ್ಷ್ಯದಿಂದ ಪಾದಾಚಾರಿ ಸಾವು!
– ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ!
– ಶಾಲೆಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳು ಕಳವು!
NAMMUR EXPRESS NEWS
ಮಂಗಳೂರು: ಪಡೀಲ್ ಪೊಲೀಸ್ ಚೆಕ್ಪೋಸ್ಟ್ ಬಳಿ ಸೋಮವಾರ ರಾತ್ರಿ ಕಾರು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟು, ಪೊಲೀಸ್ ಗಾಯಗೊಂಡ ಘಟನೆ ನಡೆದಿದೆ. ಮೃತ ಪಟ್ಟ ವ್ಯಕ್ತಿ ಒರಿಸ್ಸಾ ಮೂಲದ ದಂಡಸಿ ಮಾಲಿಕ್ ಎಂದು ಗುರುತಿಸಲಾಗಿದೆ. ಅಲ್ಲದೆ ಈ ಅಪಘಾತದಿಂದ ಚೆಕ್ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಹರೀಶ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ.
ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ!
ಬಂಟ್ವಾಳ : ಕೆಲಸ ಕೊಡಿಸುವುದಾಗಿ ಪೆರ್ನೆಯ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ತಾಲೂಕಿನ ಪೆರ್ನೆ ನಿವಾಸಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೆರ್ನೆ ನಿವಾಸಿ ಭವಿತ್ ಕೆ ಎನ್ ವಂಚನೆಗೊಳಗಾದ ಮೆರೈನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದು, ಆರೋಪಿಯನ್ನು ಪ್ರಜ್ವಲ್ ಎಂದು ಹೆಸರಿಸಲಾಗಿದೆ. ಭವಿತ್ ಅವರಿಗೆ ಪ್ರಜ್ವಲ್ ಎಂಬಾತ ಸಾಮಾಜಿಕ ಜಾಲತಣವಾದ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಆತನನ್ನು ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಭೇಟಿಯಾಗಿರುತ್ತಾನೆ.
ಭೇಟಿ ವೇಳೆ ಮಾತುಕತೆ ನಡೆದು ಮೆರೈನ್ ಕೆಲಸಕ್ಕಾಗಿ 3 ಲಕ್ಷ ಖರ್ಚು ಇದೆ ಎಂದು ಹೇಳಿದಂತೆ ಭವಿತ್ ಅವರು ಜೂನ್ 16 ರಿಂದ ಆಗಸ್ಟ್ 28ರ ಅವಧಿಯಲ್ಲಿ ಹಂತ ಹಂತವಾಗಿ ಪ್ರಜ್ವಲ್ ಖಾತೆಗೆ ಒಟ್ಟು 2.10 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಬಳಿಕ ಪ್ರಜ್ವಲ್ ನಿಮಗೆ ಕೆಲಸ ಕೊಡಲು ಅಗುವುದಿಲ್ಲ. 10 ದಿನಗಳಲ್ಲಿ ನಿಮ್ಮ ಹಣ ವಾಪಾಸು ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದು ಇದುವರೆಗೆ ಭವಿತ್ ಅವರಿಗೆ ಕೆಲಸವೂ ನೀಡದೆ ಹಣವನ್ನೂ ವಾಪಾಸು ನೀಡದೆ ವಂಚಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಾಲೆಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳು ಕಳವು!
ಪುತ್ತೂರು :ಶಾಲಾ ಕೊಠಡಿಯ ಬೀಗ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಕೊಳ್ತಿಗೆ ಗ್ರಾಮದ ಸಿದ್ಧಮೂಲೆ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಬಗ್ಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷರಾದ ಕೃಷ್ಣವೇಣಿ ಎಸ್ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಶನಿವಾರ ಸಂಜೆ ಶಾಲೆಗೆ ಬೀಗ ಹಾಕಿ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಶಾಲೆಗೆ ರಜೆ ಇತ್ತು. ಮಂಗಳವಾರ ಬೆಳಿಗ್ಗೆ ಶಿಕ್ಷಕರಾದ ಅನಿರುದ್ಧ ಹಾಗೂ ವೀಣಾ ಕುಮಾರಿ ಶಾಲೆಗೆ ಬಂದಾಗ ಶಾಲಾ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದಿರುವುದು ಕಂಡು ಬಂದಿದೆ.
ಈ ಬಗ್ಗೆ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದಂತೆ ಅವರು ಬಂದು ಪರಿಶೀಲಿಸಿದ್ದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿದ ಅಪರಿಚಿತ ಕಳ್ಳರು ಅಲ್ಲಿದ್ದ 46 ಸಾವಿರ ರೂಪಾಯಿ ಮೌಲ್ಯದ ಕಂಪ್ಯೂಟರ್ ಹಾಗೂ ಮಾನಿಟರ್, 2 ಕಪಾಟುಗಳಲ್ಲಿದ್ದ 14,500/- ರೂಪಾಯಿ ನಗದು ಹಣ, 1500/- ರೂಪಾಯಿ ಮೌಲ್ಯದ ಚಾರ್ಜರ್ ಲೈಟ್, 6 ಸಾವಿರ ರೂಪಾಯಿ ಮೌಲ್ಯದ 2 ಕಾರ್ಡ್ ಲೆಸ್ ಮೈಕ್, 5 ಸಾವಿರ ರೂಪಾಯಿ ಮೌಲ್ಯದ ಸ್ಪೀಕರ್ ಕಳವುಗೈಯ್ಯಲಾಗಿದೆ. ಕಳವಾಗಿರುವ ಒಟ್ಟು ಸೊತ್ತುಗಳ ಮೌಲ್ಯ 73 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಶಾಲಾ ವಿದ್ಯುತ್ ಏರಿಳಿತ ಕಾರಣಕ್ಕಾಗಿ ಶಾಲೆಗೆ ಬೀಗ ಹಾಕಿ ತೆರಳುವಾಗ ಶಿಕ್ಷಕರು ಸೀಸಿ ಕ್ಯಾಮೆರಾ ಆಫ್ ಮಾಡಿ ತೆರಳಿದ್ದರಿಂದ ಕಳ್ಳರ ಸೀಸಿ ಕ್ಯಾಮೆರಾ ಫೂಟೇಜ್ ಲಭ್ಯವಾಗಿಲ್ಲ. .