ಕಾರ್ಕಳದಲ್ಲಿ ಪತ್ನಿಯಿಂದಲೇ ಪತಿ ಕೊಲೆ?!
– ಗಂಡನಿಗೆ ವಿಷ ಉಣಿಸಿ,ಬೆಡ್ಶೀಟ್ ಮುಖಕ್ಕೆ ಒತ್ತಿ ಕೊಲೆ
– ಅನೈತಿಕ ಸಂಬಂಧಕ್ಕೆ ಪತಿಯ ಹತ್ಯೆ : ಹೇಗೆ ಘಟನೆ?
NAMMUR EXPRESS NEWS
ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಕೈ ಹಿಡಿದ ಗಂಡನನ್ನು ಹೆಂಡತಿಯೇ ವಿಷ ಉಣಿಸಿ ಬಳಿಕ ಉಸಿರು ಗಟ್ಟಿಸಿ ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ಮರ್ನೆ ಗ್ರಾಮದಲ್ಲಿ ನಡೆದಿದೆ. ಇದೀಗ ಹೆಂಡತಿ ಮತ್ತು ಆಕೆಯ ಪ್ರಿಯಕರ ಜೈಲು ಪಾಲಾಗಿದ್ದಾರೆ. 44 ವರ್ಷದ ಬಾಲಕೃಷ್ಣ ಕೊಲೆ ಆಗಿದ್ದು ಆತನನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನ ಗ್ರಾಮದ ದಿಲೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಬಾಲಕೃಷ್ಣ(44) ರವರಿಗೆ ಕಳೆದ 25 ದಿನಗಳಿಂದ ಜ್ವರ ಮತ್ತು ವಾಂತಿ ಶುರುವಾಗಿದ್ದು ಈ ಬಗ್ಗೆ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರನ್ನು ಪರಿಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಮಂಗಳೂರು ವೆನ್ಲಾಕ್ ಆಸ್ಪತ್ರೆ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಅಲ್ಲಿ ಅವರು ಗುಣಮುಖರಾಗದ ಕಾರಣ ಅ.19ರಂದು ರಾತ್ರಿ ಮನೆಗೆ ಕರೆತಂದಿರುತ್ತಾರೆ. ಈ ಮಧ್ಯೆ ಅ.20ರಂದು ಬೆಳಗಿನ ಜಾವ 3.30 ಗಂಟೆಗೆ ಬಾಲಕೃಷ್ಣ ಮೃತಪಟ್ಟಿದ್ದರು. ಈ ಘಟನೆ ಬಳಿಕ ಅಲ್ಲಿ ಬಾಲಕೃಷ್ಣರವರು ಸಹಜವಾಗಿ ಮೃತ ಪಡದೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ರಾಮಕೃಷ್ಣರವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪತ್ನಿ ಮೇಲೆ ಅನುಮಾನ: ದೂರು ದಾಖಲು
ಬಾಲಕೃಷ್ಣರವರ ಹೆಂಡತಿ ಪ್ರತಿಮಾಳಿಗೆ ಈ ಮೊದಲು ಹಿರ್ಗಾನದ ದಿಲೀಪ ಎಂಬಾತನ ಜೊತೆ ಗೆಳೆತನ ಇತ್ತು. ಬಾಲಕೃಷ್ಣರು ಒಮ್ಮೆಲೆ ಅಸೌಖ್ಯ ಉಂಟಾಗಿ ಮೃತಪಟ್ಟಿದ್ದರಿಂದ ಸಂಶಯದಿಂದ ವಿಚಾರಣೆ ನಡೆಸಿದಾಗ ದಿಲೀಪ ಯಾವುದೋ ವಿಷ ಪದಾರ್ಥ ತಂದು ಇದನ್ನು ಬಾಲಕೃಷ್ಣನಿಗೆ ಊಟದಲ್ಲಿ ಹಾಕಿ ಕೊಡು ಅವನು ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ತನಗೆ ಕೊಟ್ಟಿದ್ದು, ಇದನ್ನು ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿರುತ್ತೇನೆ. ಬಾಲಕೃಷ್ಣರಿಗೆ ಅಸೌಖ್ಯ ಉಂಟಾಗಿದ್ದು, ಹೇಳಿದಂತೆ ಅ.20ರಂದು ಬೆಳಗಿನ ಜಾವ 1.39 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಅಲ್ಲಿಯೆ ಇದ್ದ ಬೆಡ್ಶೀಟ್ನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಹೇಳಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.