ಮಂಗಳೂರು: ಹೊಸ ವರ್ಷಕ್ಕೆ ಸಿದ್ಧತೆ ಹೇಗಿದೆ?
– ಹೊಸ ವರ್ಷಾಚರಣೆಯ ಸಂಭ್ರಮ, ಕರಾವಳಿಗೆ ಭಾರೀ ಸಂಖ್ಯೆಯ ಪ್ರವಾಸಿಗರ ಆಗಮನ
– ವ್ಯಾಪಕ ಪೊಲೀಸ್ ಬಂದೋಬಸ್ತ್
NAMMUR EXPRESS NEWS
ಮಂಗಳೂರು/ಉಡುಪಿ: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಕರಾವಳಿಗೆ ಭಾರೀ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ. ಕರಾವಳಿಯ ಎಲ್ಲೆಡೆ ಭಾರೀ ವಾಹನ ದಟ್ಟಣೆ ಕೂಡ ಕಂಡು ಬಂದಿದೆ. ಸುಗಮ ವ್ಯವಸ್ಥೆ ಕಲ್ಪಿಸಲು ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ. ಮಂಗಳೂರು-ಬೆಂಗಳೂರು ಹೆದ್ದಾರಿ, ಮಂಗಳೂರು-ಗೋವಾ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಲೇ ಇದು, ದಟ್ಟಣೆ ಅವಧಿ ಹೊರತಾಗಿಯೂ ಇದು ಮುಂದುವರಿದಿದೆ.
ಹೆಚ್ಚುವರಿ ಬಂದೋಬಸ್ತ್!
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರ ಮಧ್ಯಾಹ್ನದಿಂದ ಮಂಗಳೂರು ನಗರದ ವಿವಿಧೆಡೆ ಹೆಚ್ಚುವರಿ ಬಂದೋಬಸ್ತ್, ತಪಾಸಣೆ ಮಾಡಲಾಗುವುದು.
ಪ್ರಮುಖ ಪಾಯಿಂಟ್ಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು, ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜಿಸಲಾಗುವುದು. ಹೆಚ್ಚುವರಿ ಚೆಕ್ಪೋಸ್ಟ್ಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುವುದು. ಮದ್ಯಸೇವಿಸಿ ವಾಹನ ಚಾಲನೆ, ಡ್ರಗ್ಸ್ ಸೇವನೆ ತಪಾಸಣೆ ಕೂಡ ನಡೆಸಲಾಗುವುದು. ವ್ಹೀಲಿಂಗ್, ಅತೀವೇಗ, ನಿರ್ಲಕ್ಷ್ಯದ ಚಾಲನೆ ಮೊದಲಾದವುಗಳ ಮೇಲೆಯೂ ನಿಗಾ ಇಡಲಾಗುವುದು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಮಾಜ ಘಾತುಕ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಹೊಸ ವರ್ಷ ಆಚರಿಸಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.