ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ!
– ಕರ್ನಾಟಕ ಕರಾವಳಿ ದೇವಸ್ಥಾನಗಳಿಗೆ ಹರಿದು ಭಕ್ತರ
ದಂಡು
– ದೇವಸ್ಥಾನ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ
NAMMUR EXPRESS NEWS
ಮಂಗಳೂರು: ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ. ಕದ್ರಿ ಮಂಜುನಾಥ ದೇಗುಲಕ್ಕೆ ಬೆಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಳದ ಕೆರೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೇವಳದ ಮುಂದೆ ಕಲಶ ಸ್ನಾನ ಮಾಡುತ್ತಿದ್ದಾರೆ. ಕದ್ರಿ ದೇವಳದಲ್ಲಿ ಕಲಶ ಸ್ನಾನ ಸೇವೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹೊಸ ವರ್ಷಾರಂಭದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್ನಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದೆ.
ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.