ಕರಾವಳಿಯಲ್ಲಿ ಮುಗಿಲು ಮುಟ್ಟಿದ ರಾಮೋತ್ಸವದ ಸಡಗರ
– ದೇವಸ್ಥಾನಗಳಲ್ಲಿ ರಾಮನ ನೆನೆದು ವಿಶೇಷ ಅಲಂಕಾರ
– ಎಲ್ಲೆಲ್ಲೂ ರಾಮ, ರಾಮ ಕೀರ್ತನೆ
– ಗಣ್ಯರಿಂದ ಆರತಿ, ಪೂಜೆ, ರಾಮ ಭಜನೆ
NAMMUR EXPRESS NEWS
ಮಂಗಳೂರು: ಅಯೋಧ್ಯಾ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಪುಣ್ಯ ಘಳಿಗೆಯನ್ನು ಕರಾವಳಿಯಾದ್ಯಂತವೂ ಜನ ಕಣ್ತುಂಬಿಕೊಂಡಿದ್ದಾರೆ. ಎಲ್ಲ ಕಡೆ ಹಬ್ಬದ ಸಂಭ್ರಮ, ಸಡಗರ ಕಂಡುಬಂದಿದ್ದು ಶ್ರೀ ಕ್ಷೇತ್ರ ಕಟೀಲು, ಪೊಳಲಿ, ಕದ್ರಿ, ಮಂಗಳಾದೇವಿ, ಮರೋಳಿ, ಕುದ್ರೋಳಿ, ಪಾಂಡೇಶ್ವರ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದೆ. ಮುಜರಾಯಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ಆಯೋಜನೆಗೊಂಡಿದ್ದು, ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದು, ವಿಶೇಷ ಪೂಜೆ, ರಾಮತಾರಕ ಯಜ್ಞ, ಭಜನೆ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪುಣ್ಯ ಕ್ಷಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಎಲ್ಇಡಿ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲಿ ನೋಡಿದರಲ್ಲಿ ಕೇಸರಿಯ ರಂಗು :
ಕರಾವಳಿಯ ವಿವಿಧ ಭಾಗಗಳಲ್ಲಿ ಕೇಸರಿ ಧ್ವಜ ತೋರಣ ಕಂಗೊಳಿಸಿದ್ದು, ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಶ್ರೀರಾಮನ ಕಟೌಟ್, ಶುಭ ಕೋರುವ ಬ್ಯಾನರ್ಗಳು, ಪ್ರವೇಶ ದ್ವಾರಗಳು, ಪತಾಕೆಗಳು ರಾರಾಜಿಸಿದವು. ಕೆಲವು ಬಸ್, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದ್ದವು. ವಾಹನಗಳಲ್ಲೂ ಶ್ರೀರಾಮ, ರಾಮ ಮಂದಿರದ ಸ್ಟಿಕ್ಕರ್ಗಳಿವೆ. ವಿಶೇಷವಾಗಿ ಕೆಲವು ಮನೆಗಳಲ್ಲಿ ಕೇಸರಿ ಬಾವುಟ, ಜೈ ಶ್ರೀರಾಮ್ ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ. ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ|ಡಿ.ವೀರೇಂದ್ರ ಹೆಗ್ಗಡೆ, ಆರ್ಎಸ್ಎಸ್ ಮುಖಂಡ ಡಾ|ಕಲ್ಲಡ್ಕ ಪ್ರಭಾಕರ ಭಟ್, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಹರ್ಷಿ ಓಂಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬಂಟ್ವಾಳ ಕಾಣಿಯೂರಿನ ಶ್ರೀ ಮಹಾಬಲ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಪ್ರೊ|ಎಂ.ಬಿ. ಪುರಾಣಿಕ್, ನಿಟ್ಟೆ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ವಿಶಾಲ್ ಹೆಗ್ಡೆ, ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರು ಅಯೋಧ್ಯೆಗೆ ತೆರಳಿದ್ದು, ಪ್ರಾಣ ಪ್ರತಿಷ್ಠೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಉಡುಪಿಯಲ್ಲಿ ಸಡಗರದ ವಾತಾವರಣ :
ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಸೋಮವಾರ ಬೆಳಗ್ಗೆಯಿಂದ ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನ ಗಳಲ್ಲೂ ಎಲ್ ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ರಾಮ ತಾರಕ ಜಪ ಯಜ್ಞ, ಹೋಮ, ಹವನ ಇತ್ಯಾದಿಗಳ ಜತೆಗೆ ವಿವಿಧ ಭಜನ ಮಂಡಳಿಗಳಿಂದ ಭಜನೆ ನೆರವೇರದೆ. ಶ್ರೀ ರಾಮೋತ್ಸವದ ಹೆಸರಿನಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮ ನಡೆಸಲು ಆಯಾ ದೇವಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ.
ದೇವರಿಗೆ ವಿಶೇಷ ಪೂಜೆ, ರಂಗಪೂಜೆ, ಶ್ರೀರಾಮ ಪಟ್ಟಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯ ಜತೆಗೆ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನಗಳಲ್ಲಿ ಮಾಡಲಾಗಿದೆ. ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೂ ಸಂಘ ಪರಿವಾರ ಸಂಘಟನೆಗಳು ಅಕ್ಷತೆ ವಿತರಣೆ ಮಾಡಿದ್ದು, ವಿಶ್ವ ಹಿಂದೂ ಪರಿಷತ್ ಕರೆಯಂತೆ ಜಿಲ್ಲಾದ್ಯಂತ ದೇವಸ್ಥಾನಗಳು ಮತ್ತು ಭಜನ ಮಂದಿರ ಸಹಿತ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ರಾಮೋತ್ಸವ, ಪೂಜೆ ಇತ್ಯಾದಿ ನಡೆಸಲಾಯಿತು. ಸಂಜೆ ದೇವಸ್ಥಾನ ಹಾಗೂ ಪ್ರತೀ ಮನೆಯಲ್ಲಿ ದೀಪೋತ್ಸವ ಆಚರಣೆಯಾಗಿದೆ. ಪ್ರತೀ ಮನೆಯಲ್ಲೂ ಕನಿಷ್ಠ 5 ದೀಪ ಹಚ್ಚಿದ್ದು ಕೆಲವು ದೇವಸ್ಥಾನಗಳಲ್ಲಿ ಉತ್ಸವ, ರಥೋತ್ಸವ ನಡೆದವು.
ಕಾರ್ಕಳದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿಯನ್ನು ಬಂದ್ ಮಾಡಿದ ವ್ಯಾಪಾರಸ್ಥರು :
ತಾಲೂಕಿನಾದ್ಯಂತ ಸೋಮವಾರ ರಾಮನಾಮ ಸಂಕೀರ್ತನೆ, ರಾಮಭಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಜಗೋಳಿ ದಿಡಿಂಬಿರಿಯ ಅಯ್ಯಪ್ಪ ಮಂದಿರದಲ್ಲಿ ದಿನಪೂರ್ತಿ ರಾಮೋತ್ಸವ, ಕುಣಿತ ಭಜನೆ, 1,008 ರಾಮಭಕ್ತರಿಂದ ಹನುಮಾನ್ ಚಾಲೀಸ ಪಠಣ, ಶ್ರೀರಾಮ ತಾರಕ ಮಂತ್ರ ಪಂಯಾಗ,ಶ್ರೀ ರಾಮ ಕರಸೇವಕರಿಗೆ ವಿಶೇಷ ಪ್ರಸಾದ ನೀಡಿ ಗೌರವಾರ್ಪಣೆ ನಡೆಯಿತು. ನಗರದ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ, ದೇವಸ್ಥಾನಗಳಲ್ಲಿ ಸೇರುವಂತೆ ನಗರದಲ್ಲಿ ಸ್ವಯಂ ಸೇವಕರು ಕರಪತ್ರ ಹಂಚಿ ಮನವಿ ಮಾಡಿದ್ದಾರೆ.
ಬೆಳ್ತಂಗಡಿಯಲ್ಲಿ ವಿಶೇಷ ರಂಗ ಪೂಜೆ :
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಬೆಳಗ್ಗೆ 11ರಿಂದ ಭಜನೆ ಸತ್ಸಂಗ ನಡೆದಿದ್ದು ಹೇಮಾವತಿ ವೀ. ಹೆಗ್ಗಡೆ ಚಾಲನೆ ನೀಡಿದ್ದಾರೆ. ಕನ್ಯಾಡಿ ನಿತ್ಯಾನಂದನಗರದ ಶ್ರೀ ರಾಮಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಭಜನೆ ಸತ್ಸಂಗ ನಡೆದಿದ್ದು ಮದ್ಯಾಹ್ನ 11ರಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳ್ಳುವವರೆಗೆ ಕ್ಷೇತ್ರದಲ್ಲಿ ಸೀತಾರಾಮ ಪರಿವಾರ ದೇವರಿಗೆ ವಿಶೇಷ ಪೂಜೆ, ಬಳಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೀಯಾಳಾಭಿಷೇಕಯುಕ್ತ ಮಹಾಪೂಜೆ, 120 ಅಗಲು ರಂಗಪೂಜೆ ನೆರವೇರಿದೆ. ಉಜಿರೆ ಜನಾರ್ದನ ದೇವಸ್ಥಾನ, ಸೂರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು.