ಕ್ರಿಯೇಟಿವ್ ಕಾಲೇಜಿನಲ್ಲಿ “ಗುರು ದೇವೋ ಭವ “!
– ಶಿಕ್ಷಕರ ದಿನಾಚರಣೆಯಲ್ಲಿ ಗುರುಗಳಿಗೆ ನಮಿಸಿದ ವಿದ್ಯಾರ್ಥಿಗಳು
– ಪ್ರೊ. ಬಿ.ಪದ್ಮನಾಭ ಗೌಡ, ವಿನಾಯಕ ಜೋಗ್,ಆದಂ ಶೇಕ್ ಅವರಿಗೆ ಸನ್ಮಾನದ ಗೌರವ
NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ “ಗುರು ದೇವೋ ಭವ ” ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಪದ್ಮನಾಭ ಗೌಡ, ಶಿಕ್ಷಕ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ, ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ, ಅಂತಹ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಅಪೂರ್ವ ಮನ್ನಣೆಯಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಆದಂ ಶೇಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಸ್ಥೆಯ ಉಪನ್ಯಾಸಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವಥ್ ಎಸ್. ಎಲ್, ಅಮೃತ್ ರೈ, ವಿಮಲ್ ರಾಜ್ ಜಿ. ಆದರ್ಶ್ ಎಂ. ಕೆ., ಗಣನಾಥ ಶೆಟ್ಟಿ ಮತ್ತು ಗಣಪತಿ ಕೆ. ಎಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಲೋಹಿತ್ ಎಸ್.ಕೆ. ನಿರೂಪಿಸಿ, ವಂದಿಸಿದರು