- ಶಿವಮೊಗ್ಗ ಸುಬ್ಬಣ್ಣ ಹೃದಯಘಾತದಿಂದ ವಿಧಿವಶ
- ಸಾರ್ವಜನಿಕ ದರ್ಶನ ವ್ಯವಸ್ಥೆ: ಸಂಜೆ ಅಂತ್ಯಕ್ರಿಯೆ
- ಕನ್ನಡದ ಗಾಯನ ಲೋಕದ ಮಹಾ ಕಲಾವಿದ
NAMMUR EXPRESS NEWS
ಬೆಂಗಳೂರು: ಕನ್ನಡದ ಮತ್ತೊಂದು ಸಂಗೀತದ ಕೊಂಡಿ, ಮಲೆನಾಡಿನ ಸಾಧಕ ಖ್ಯಾತ ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ(83) ಗುರುವಾರ ರಾತ್ರಿ ಹೃದಯಸ್ತಂಬನದಿಂದ ವಿಧಿವಶರಾಗಿದ್ದಾರೆ.
ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಮಾತನಾಡಿ, ಗುರುವಾರ ಸಂಜೆ ಅರೋಗ್ಯ ಸರಿ ಇರಲಿಲ್ಲ. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಜಯದೇವಕ್ಕೆ ಶಿಫ್ಟ್ ಮಾಡುವಷ್ಟರಲ್ಲಿ ಹೃದಯಘಾತವಾಗಿದೆ. ಬೆಂಗಳೂರಿನಲ್ಲೇ ಶುಕ್ರವಾರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಾಡಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಹಾಡುಗಾರ…
ಕಾಡು ಕುದುರೆ ಸಿನಿಮಾದ `ಕಾಡು ಕುದುರೆ ಓಡಿಬಂದಿತ್ತಾ’ ಹಾಡಿಗೆ 1979ರಲ್ಲಿ ಸುಬ್ಬಣ್ಣ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ.
ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸುಬ್ಬಣ್ಣ ಅವರಿಗೆ ಲಭಿಸಿದೆ. ಶಿವಮೊಗ್ಗ ಸುಬ್ಬಣ್ಣ ಗಾಯಕರಾಗಿ ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.ಸುಬ್ಬಣ್ಣ ಅವರ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ ‘.ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು. ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು.ವಕೀಲರಾಗಿ ವೃತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡಿರಲಿಲ್ಲ. ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು.ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾಠ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ.. ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.