ಭೂಮಿ ಹುಣ್ಣಿಮೆ ಹಬ್ಬ: ರೈತರ ಸಂಭ್ರಮದ ಹಬ್ಬ!
– ನಾಳೆ 101 ಬಗೆಯ ಬೆರಕೆ ಸೊಪ್ಪಿನ ಪಲ್ಯ ಸಂಗ್ರಹ
– ಅ. 17ರ ಮುಂಜಾನೆ ಭೂಮಿ ತಾಯಿಗೆ ಸೀಮಂತದ ಹಬ್ಬ
– ಮಲೆನಾಡು, ಕರಾವಳಿ ಭಾಗದಲ್ಲಿ ಆಚರಣೆ
ವಿಶೇಷ ವರದಿ: ಪ್ರಾಪ್ತಿ ಸಾಗರ
NAMMUR EXPRESS NEWS
ಮಲೆನಾಡಿನ ಗ್ರಾಮೀಣ ರೈತರಿಗೆ ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ ಸಡಗರಗಳ ದೊಡ್ಡ ಹಬ್ಬ. ಭೂಮಿ ತಾಯಿ ಗರ್ಭಿಣಿಯಾಗಿದ್ದಾಳೆ, ತಾಯಿಗೆ ಸೀಮಂತ ಮಾಡಬೇಕು ಎಂಬ ನಂಬಿಕೆಯಿಂದ ಭೂಮಿ ಹುಣ್ಣಿಮೆ ನಡೆಸುವ ರೂಢಿ ತಲೆತಲಾಂತರದಿಂದ ಬಂದಿದೆ. ಮಲೆನಾಡು, ಕರಾವಳಿ ಈ ಭಾಗಗಳನ್ನು ಕೂಡ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡುತ್ತಾರೆ ಮತ್ತು ಈಗಾಗಲೇ ಎಲ್ಲಾ ಸಿದ್ಧತೆಗಳು ಕೂಡ ನಡೆಯುತ್ತಾ ಇವೆ.
ಅ. 16ರ ಬುಧವಾರ 101 ಬಗೆಯ ಬೆರಕೆ ಸೊಪ್ಪಿನ ಪಲ್ಯವನ್ನು ಮಾಡುತ್ತಾರೆ. ಹಸಿರಾಗಿ ನಿಂತ ಭೂಮಿ ತಾಯಿಗೆ ಹಬ್ಬದ ಆಚರಣೆಯೇ ವಿಶೇಷ ಮಲೆನಾಡಿನ ರೈತಾಪಿ ವರ್ಗದ ಭೂಮಿ ಹುಣ್ಣಿಮೆ ಹಬ್ಬ ತುಂಬಾ ಸಡಗರ.
ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ವಸ್ತು . ಇದನ್ನು ಹಿಂದಿನಿಂದಲೂ ಕೂಡ ಇದನ್ನ ಕಾಪಾಡಿಕೊಂಡು ರೂಡಿಸಿಕೊಂಡು, ಸಿಂಗರಿಸಿ ಪೂಜೆಗೆ ಬಳಸಲಾಗುತ್ತದೆ.
– ಇಡೀ ರಾತ್ರಿ ಜಾಗರಣೆಯ…ಅಡುಗೆ ಸಂಭ್ರಮ..!
ಭೂಮಿ ಹುಣ್ಣಿಮೆ ಪೂಜೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ಆ ಸಂಧರ್ಭದಲ್ಲಿ ‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ” ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಗುತ್ತದೆ. ಈ ಸಂಪ್ರದಾಯ ಎಲ್ಲಾ ಆಚರಣೆಗಿಂತ ವಿಭಿನ್ನವಾಗಿದೆ.