ಕಾಡಾನೆಗಳ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ಪ್ರತಿಭಟನೆ..!
– ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ
– ಕಾಫಿನಾಡಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕಾಡಾನೆಗಳ ದಾಳಿ
– ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶಗೊಂಡ ರೈತ
NAMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಕಾಡಾನೆಗಳ ದಾಳಿ ಹೆಚ್ಚಾಗಿದ್ದು ದಾಳಿಯಿಂದ ಅಪಾರ ಪ್ರಮಾಣದ ಬೆಳೆ,ಪ್ರಾಣ ಹಾನಿ ಸಂಭವಿಸಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಎಚ್ಚೆತ್ತುಕೊಳ್ಳದ, ಆನೆ ದಾಳಿ ನಿಯಂತ್ರಿಸಲು ಯಾವುದೇ ಕ್ರಮಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಇಂದು ಚಿಕ್ಕಮಗಳೂರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಡಿಎಫ್ಓ ಕಛೇರಿಗೆ ತೆರಳಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ರೈತರ ಬದುಕಿಗೆ ನೆರವಾಗಬೇಕೆಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿ ಕಲ್ಮುರುಡಪ್ಪ ಸೇರಿದಂತೆ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ,ಜಿಲ್ಲಾ ರೈತ ಮೋರ್ಚಾ ಪ್ರಭಾರಿ ರಾಮಸ್ವಾಮಿ ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು,ನಾಯಕರುಗಳು ಭಾಗವಹಿಸಿದ್ದರು.
ದಿನೇ ದಿನೇ ಹೆಚ್ಚುತ್ತಲೇ ಇದೇ ಕಾಡಾನೆ ದಾಳಿ..!!?
ಕಳೆದೊಂದು ವರ್ಷಗಳಿಂದ ಮೂಡಿಗೆರೆ ಭಾಗದಿಂದ ಶುರುವಾದ ಕಾಡಾನೆಗಳ ದಾಳಿ ದಿನಕಳೆದಂತೆ ಹೆಚ್ಚುತ್ತಲೇ ಇದ್ದು ಮೂಡಿಗೆರೆ,ಚಿಕ್ಕಮಗಳೂರು,ಆಲ್ದೂರು,ಬಾಳೆಹೊನ್ನೂರು,ಶೃಂಗೇರಿ,ಕೊಪ್ಪ,ಎನ್ ಆರ್ ಪುರ ಭಾಗಗಳಿಗೂ ವಿಸ್ತರಿಸಿ ಆನೆಗಳ ಹಿಂಡು ದಾಳಿ ಮಾಡಿ ಕೆಲ ಕಡೆ ಒಂಟಿಸಲಗ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಜಮೀನು,ಬೆಳೆ ನಾಶ ಮಾಡಿದೆ. ಮೊನ್ನೆಯಷ್ಟೇ ಕೊಪ್ಪ ತಾಲೂಕಿನ ಸೀತೂರಿನಲ್ಲಿ ಆನೆಯೊಂದು ದಾಳಿ ನಡೆಸಿ ಉಮೇಶ್ ಎಂಬ ರೈತನನ್ನು ತುಳಿದು ಸಾಯಿಸಿತ್ತು ಇಷ್ಟೆಲ್ಲ ಘಟನೆಗಳು ನಡೆದರೂ ಅರಣ್ಯ ಇಲಾಖೆ ರೈತರ ಮೇಲೆ ನಿಯಮಗಳನ್ನು ಹೇರುತ್ತಿದೆಯೇ ವಿನಃ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಂಭಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಇಲಾಖೆ,ಸಚಿವರು,ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಅನ್ನದಾತನ ನೆರವಿಗೆ ನಿಲ್ಲಬೇಕಾಗಿದೆ. ದೇಶದ ಬೆನ್ನೆಲುಬು ರೈತ ಅಂತಹ ರೈತರ ಬೆನ್ನಿಗೆ ನಿಲ್ಲಬೇಕಾದುದು ಎಲ್ಲರ ಕರ್ತವ್ಯ ಇದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.