ಮಳೆ, ಬಿಸಿಲಿನ ಎಫೆಕ್ಟ್: ಭತ್ತಕ್ಕೆ ಈಗ ಸಂಕಟ!
– ಭತ್ತಕ್ಕೆ ಕಂದು ಜಿಗಿ ಹುಳದ ಕಾಟ: ಸಾವಿರಾರು ಹೆಕ್ಟರ್ ವ್ಯಾಪಿಸುವ ಸಾಧ್ಯತೆ
– ಅಡಿಕೆ, ಕಾಫಿ ಬಳಿಕ ಈಗ ಭತ್ತಕ್ಕೂ ರೋಗ
– ಮಲೆನಾಡಲ್ಲಿ ಹೆಚ್ಚಳ: ಹತೋಟಿ ಹೇಗೆ?
NAMMUR EXPRESS NEWS
ಮಳೆ ಮತ್ತು ಬಿಸಿಲಿನ ಕಾರಣದಿಂದ ಭತ್ತಕ್ಕೆ ಕಂದು ಜಿಗಿ ಹುಳ ಬಾದಿಸುತ್ತಿದೆ. ಒಂದಲ್ಲ ಎರಡಲ್ಲ ಸಾವಿರಾರು ಹೆಕ್ಟರ್ ಪ್ರದೇಶವನ್ನ ಕೀಟ ಆವರಿಸಿದ್ದು ಮಲೆನಾಡಿನ ಅನ್ನದಾತರು ಕಂಗಾಲಾಗಿದ್ದಾರೆ. ಪ್ರಸ್ತುತ ವರ್ಷ 63,670 ಹೆಕ್ಟರ್ ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ತೆನೆ ಗಟ್ಟಲಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕಂದು ಜಿಗಿ ಹುಳ ತಣ್ಣೀರಚುತ್ತಿದೆ. ಈಗಾಗಲೇ ಸಾವಿರಾರು ಹೆಕ್ಟರ್ ಗೆ ವ್ಯಾಪಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರದಾಗಿದೆ.
ಸೊರಬ ತಾಲೂಕಿನಲ್ಲಿ ಗರಿಷ್ಟ 18.72 5 ಹೆಕ್ಟರ್, ಭದ್ರಾವತಿ ತಾಲೂಕಿನ ಕನಿಷ್ಠ 5.020 ಹೆಕ್ಟರ್ ನಲ್ಲಿ ಭತ್ತ ಬೆಳೆಯಲಾಗಿದೆ. ಉಳಿದಂತೆ ಸಾಗರ ತಾಲೂಕಿನಲ್ಲಿ 12.166, ಹೊಸನಗರದಲ್ಲಿ 7,696, ಶಿಕಾರಿಪುರದಲ್ಲಿ 7,500, ತೀರ್ಥಹಳ್ಳಿಯಲ್ಲಿ 6,418 ಮತ್ತು ಶಿವಮೊಗ್ಗದಲ್ಲಿ 6,145 ಹೆಕ್ಟರ್ ನಲ್ಲಿ ಭತ್ತ ಬೆಳೆಯಲಾಗಿದ್ದು, ಸೊರಬ, ಶಿವಮೊಗ್ಗ, ಹೊಸನಗರ ತೀರ್ಥಹಳ್ಳಿ, ಶಿಕಾರಿಪುರ ಸೇರಿ ಜಿಲ್ಲೆಯ ಹಲವೆಡೆ ಕೀಟಭಾದೆ ಅತಿ ವೇಗವಾಗಿ ವ್ಯಾಪಿಸುತ್ತಿದೆ.
ಈಗಾಗಲೇ ಕೃಷಿ ಇಲಾಖೆಯಿಂದ ರೈತರಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಕೀಟಬಾಧೆಯಿಂದ ಬೆಳೆಯನ್ನ ಹೇಗೆ ರಕ್ಷಣೆ ಮಾಡಬೇಕು ಎಂಬ ಮಾಹಿತಿ ನೀಡುತ್ತಿದ್ದಾರೆ. ಕೃಷಿ ಇಲಾಖೆ, ಕೃಷಿ ತಜ್ಞರ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಿದರು ಕೀಟ ಬಾಧೆ ತಗ್ಗುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ ಬದಲಾಗಿ ದಿನದಿಂದ ದಿನಕ್ಕೆ ಅಕ್ಕ ಪಕ್ಕದ ಜಮೀನಿನಲ್ಲಿರುವ ಭತ್ತಕ್ಕೂ ವ್ಯಾಪಿಸುತ್ತಿದೆ ಸಾವಿರಾರು ರೂ ಖರ್ಚು ಮಾಡಿ ಕೀಟನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಎಂಬುದು ರೈತರ ಕಳವಳಕ್ಕೆ ಕಾರಣವಾಗಿತ್ತು ಇದೀಗ ಕಳೆದ 4, 5 ದಿನಗಳಿಂದ ಬಿರುಸು ಮಳೆ ಕಂದುಜಿಗಿ ಹುಳ ಕಾಟಕ್ಕೆ ಕೊಂಚ ಬ್ರೇಕ್ ಹಾಕಿದೆ.
– ಕಂದುಜಿಗೆ ಹುಳದಿಂದ ಬೆಳೆ ಸರ್ವನಾಶ
ಕಂದು ಜಿಗಿ ಹುಳ ಲಕ್ಷಗಟ್ಟಲೆ ಸಂತಾನೋತ್ಪತ್ತಿ ಮಾಡುತ್ತಿದೆ ಸಾಮಾನ್ಯವಾಗಿ ಕಂದು ಜಿಗಿ ಹುಳ ಕಡಿಮೆ ಅವಧಿಯಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಂಡು ಭತ್ತವನ್ನು ಸಂಪೂರ್ಣ ನಾಶ ಮಾಡುತ್ತಿವೆ. ಕಂದು ಜಿಗಿ ಹುಳಗಳು ಭತ್ತದ ಬುಡದಲ್ಲಿ ರಸ ಹೀರುತ್ತಿದೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತ ಒಂದೆರಡು ದಿನಗಳಲ್ಲೇ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈ ನಡುವೆ ಮಳೆ ಮತ್ತು ಬಿಸಿಲಿನ ಕಣ್ಣ ಮುಚ್ಚಾಲೆ ಆಟದಿಂದ ಭತ್ತಕ್ಕೆ ಈ ಬಾರಿ ಕೀಟ ಭಾಧೆ ಶುರುವಾಗಿದೆ. ಪ್ರತಿ ಎಕರೆಗೆ 25 ರಿಂದ 30 ಚೀಲ ಮೇಲ್ಪಟ್ಟು ಭತ್ತ ಬೆಳೆಯುತ್ತಿದ್ದ ರೈತರನ್ನು ಕೀಟಬಾಧೆ ಚಿಂತೆಗೆ ದೂಡಿದೆ. ಕೀಟ ಬಾಧೆ ನಿಯಂತ್ರಣಕ್ಕೆ ಬಾರದಿದ್ದರೆ ಪ್ರತಿ ಎಕರೆಗೆ ಕನಿಷ್ಠ 10 ಚೀಲ ಭತ್ತ ಬೆಳೆಯುವುದೂ ಕಷ್ಟವಾಗುತ್ತದೆ ಎಂಬುದು ರೈತರ ಆತಂಕ.
– ಹತೋಟಿ ಹೇಗೆ?
ಕೀಟಬಾಧೆ ಹತೋಟಿಗೆ ಪ್ರತಿ ಲೀಟರ್ ನೀರಿಗೆ ಟ್ರಿಪ್ಪುಮೆಜೋಪಿರಿನ್ 0.5 ಮಿಲಿ ಅಥವಾ ಪ್ರೋನಿಕಾಮಿಡ್ 0.3 ಗ್ರಾಂ ಅಥವಾ ಕ್ಲೋಥಿಯಾನಿಡಿನ್ 0.1 ಗ್ರಾಂ ಅಥವಾ ಪ್ರೈಮಟೋಜಿನ್ 0.6 ಗ್ರಾಂ ಅನ್ನು ಬೆರೆಸಿ ಗಿಡದ ಬುಡ ಭಾಗ ನೆನೆಯುವಂತೆ ಸಿಂಪಡಿಸಬೇಕು. ಒಮ್ಮೆ ಸಿಂಪಡಣೆ ಮಾಡಿದ 10 ರಿಂದ 15 ದಿನಗಳ ಅಂತರದಲ್ಲಿ ಅಗತ್ಯವಿದ್ದರೆ ಮತ್ತೊಮ್ಮೆ ಸಿಂಪಡಣೆ ಮಾಡುವುದು. ತೆನೆ ಬರುವ ಮೊದಲು ಅದರ ಬಾಧೆ ಕಂಡುಬಂದಲ್ಲಿ ಎಕ್ಕರೆಗೆ 5 ಕೆಜಿ ಪೋರೇಟ್ ಅನ್ನು ಮರಳಿನಲ್ಲಿ ಮಿಶ್ರಣ ಮಾಡಿ ಗದ್ದೆಗೆ ಹಾಕುವ ಮೂಲಕ ಕೀಟ ಬಾಧೆ ತಡೆಯಬಹುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.