ಮಲ್ನಾಡ್ ಟಾಪ್ ನ್ಯೂಸ್
ಬಾಳೆಹೊನ್ನೂರು: ಪ್ರಿಯಕರನಿಂದ ಗೃಹಿಣಿ ಹತ್ಯೆ, ಆರೋಪಿ ಸೆರೆ
– ಶಿವಮೊಗ್ಗ: ಜೀರೋ ಟ್ರಾಫಿಕ್ ಮೂಲಕ ಮಣಿಪಾಲ ಆಸ್ಪತ್ರೆಗೆ 6 ದಿನದ ಮಗು ರವಾನೆ
– ಶಿವಮೊಗ್ಗ: ಚಲಿಸುತಿದ್ದ ಕ್ಯಾಂಟರ್ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವು
– ದಾಂಡೇಲಿ: ಶಾಲಾ ಪ್ರವಾಸದ ಬಸ್ ಮಗುಚಿ 45 ಮಕ್ಕಳಿಗೆ ಗಾಯ
NAMMUR EXPRESS NEWS
ಬಾಳೆಹೊನ್ನೂರು: ಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು, ಕೆರೆಗೆ ತಳ್ಳಿ ಹತ್ಯೆ ಮಾಡಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಡಿ. 7 ರಂದು ಸಂಜೆ ಪೊಲೀಸರು ಬಂಧಿಸಿದ್ದಾರೆ. ಎನ್.ಆರ್.ಪುರ ತಾಲೂಕಿನ ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ತೃಪ್ತಿ (25) ಹತ್ಯೆಗೊಳಗಾದ ವಿವಾಹಿತೆ. ಈಕೆಯನ್ನು ಹತ್ಯೆ ಮಾಡಿದ್ದ ಬೆಂಗಳೂರಿನ ಆನೇಕಲ್ ಮೂಲದ ಆರೋಪಿ ಚಿರಂಜೀವಿ ಪರಾರಿಯಾಗುತ್ತಿದ್ದ ವೇಳೆ ವಿಶೇಷ ಪೊಲೀಸ್ ತಂಡಗಳ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ತೃಪ್ತಿ ಮತ್ತು ಬೆಂಗಳೂರಿನ ಚಿರಂಜೀವಿಗೆ ಮೊಬೈಲ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ತಿಂಗಳು ತೃಪ್ತಿ ಗಂಡ, ಮಕ್ಕಳಿಂದ ಬೇರ್ಪಟ್ಟು ಮನೆಬಿಟ್ಟು ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆ ಗಂಡ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ಸ್ವಗ್ರಾಮಕ್ಕೆ ಕರೆತಂದು ರಾಜೀ ಸಂಧಾನ ನಡೆಸಿ ಪ್ರಿಯಕರನೊಂದಿಗೆ ತೆರಳದಂತೆ ಸೂಚಿಸಿ ಆಕೆಯನ್ನು ಪತಿಯೊಂದಿಗೆ ಕಳುಹಿಸಿದ್ದರು.
ಆ ಬಳಿಕ ತೃಪ್ತಿ ತನ್ನ ಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು. ಇದರಿಂದ ಪ್ರಿಯಕರ ಚಿರಂಜೀವಿ ಕೋಪಗೊಂಡಿದ್ದು, ಕಿಚ್ಚಬ್ಬಿ ಗ್ರಾಮದ ಆಕೆಯ ಮನೆಗೆ ಗಂಡ ಇಲ್ಲದ ವೇಳೆ ಆಗಮಿಸಿ ಅವಳ ಮಕ್ಕಳ ಎದುರೇ ಚಾಕುವಿನಿಂದ ಇರಿದು ಮನೆ ಸಮೀಪದಲ್ಲಿ ಇರುವ ಕೆರೆಗೆ ತಳ್ಳಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.
ತೃಪ್ತಿಗೆ ನಾಲ್ಕು ಹಾಗೂ ಎರಡು ವರ್ಷದ ಮಕ್ಕಳಿದ್ದು, ಅವರ ಎದುರಲ್ಲೇ ಘಟನೆ ನಡೆದಿರುವುದರಿಂದ ದಿಗ್ಧಮೆಗೊಂಡಿದ್ದಾರೆ. ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್. ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್ಐ ರವೀಶ್ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.
– ಶಿವಮೊಗ್ಗ: ಜೀರೋ ಟ್ರಾಫಿಕ್ ಮೂಲಕ ಮಣಿಪಾಲ ಆಸ್ಪತ್ರೆಗೆ 6 ದಿನದ ಮಗು ರವಾನೆ
ಶಿವಮೊಗ್ಗ: ತುರ್ತು ಚಿಕಿತ್ಸೆ ಆಗತ್ಯವಿದ್ದ ಹಿನ್ನಲೆಯಲ್ಲಿ ಮಗುವೊಂದನ್ನು ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಡಿ. 8 ರಂದು ರವಾನೆ ಮಾಡಲಾಗಿದೆ. ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಸಾಗರ ಮೂಲದ ಸುಮಂಗಳ ಹಾಗೂ ಲೋಕೆಶ್ ದಂಪತಿಗಳ 6 ದಿನದ ಗಂಡು ಮಗುವಿಗೆ ಐದು ದಿನದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಣಿಪಾಲಕ್ಕೆ ತರಲಾಗುತ್ತಿದೆ. ವೈದ್ಯರು, ಅಧಿಕಾರಿಗಳು ಮತ್ತು ಪೊಲೀಸರು ಮಗುವನ್ನು ರವಾನಿಸಲು ನೆರವಾಗಿದ್ದಾರೆ.
– ಶಿವಮೊಗ್ಗ: ಚಲಿಸುತಿದ್ದ ಕ್ಯಾಂಟರ್ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವು
ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.
ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತ ದುರ್ಧೈವಿಯಾಗಿದ್ದಾರೆ. ಡಿ.5ರಂದು ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಿಂದ ಸೊರಬ ತಾಲೂಕಿನ ಸುತ್ತಕೋಟೆಗೆ ತೆರಳುವ ರಸ್ತೆಮಾರ್ಗದಲ್ಲಿ ಸಾಸರಹಳ್ಳಿ ಸಮೀಪ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್ಗೆ ತಗುಲಿದೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಮೃತನ ತಂದೆ ರಿಯಾಜ್ ಅಹ್ಮದ್ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
– ದಾಂಡೇಲಿ: ಶಾಲಾ ಪ್ರವಾಸದ ಬಸ್ ಮಗುಚಿ 45 ಮಕ್ಕಳಿಗೆ ಗಾಯ
ದಾಂಡೇಲಿ: ದಾಂಡೇಲಿಗೆ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳಲ್ಲಿದ್ದ ಖಾಸಗಿ ಬಸ್ ಮಾರ್ಗದ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಡಿ. 8 ರಂದು ನಡೆದಿದೆ. ಗಣೇಶಗುಡಿಯಲ್ಲಿ ಪ್ರವಾಸ ಮುಗಿಸಿಕೊಂಡು ದಾಂಡೇಲಿಗೆ ವಾಪಸ ಬರುತ್ತಿದ್ದಾಗ ಎದುರಿನಿಂದ ಬಂದ ಕಾರನ್ನು ತಪ್ಪಿಸಲು ಹೋದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಗಟಾರಿಗೆ ಉರುಳಿ ಬಿದ್ದ ಪರಿಣಾಮವಾಗಿ ಬಸ್ ನಲ್ಲಿ ಇದ್ದ 45 ಮಕ್ಕಳಿಗೆ ಗಾಯಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸೇಂಟ್ ಆಂಥೋನಿ ಹೈಸ್ಕೂಲ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಪಕ್ಕದಲ್ಲಿನ ರೆಸಾರ್ಟ್ ನವರು ಹಾಗೂ ಸ್ಥಳೀಯರು ಬಸ್ ನಲ್ಲಿ ಇದ್ದ ಮಕ್ಕಳನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರಾದ ರಫೀಕ್ ಕುಟ್ಟಿ, ಇರ್ಷಾದ್ ಖಾನ್, ಅಶ್ಫಾಕ್ ನಾಯ್ಕ, ಮೆಹಬೂಬ್ ಮುಜಾವರ, ರಮೇಶ ನಾದರ ಬಸ್ ನಲ್ಲಿದ್ದ ಮಕ್ಕಳನ್ನು ರಕ್ಷಿಸುವಲ್ಲಿ ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರಾಮನಗರದ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.