ಶೃಂಗೇರಿ ಶಾಸಕ ರಾಜೇಗೌಡರಿಗೆ ಕೊಲೆ ಬೆದರಿಕೆ
- ಅರಣ್ಯ ಭೂಮಿ ವಿವಾದ: ಶಾಸಕರಿಗೆ ತಲೆಬಿಸಿ
- ಶೋಭಾ ಕರಂದ್ಲಾಜೆ ಹೆಸರು ಬದಲಾವಣೆ?!
- ಬಿಜೆಪಿ ಟಿಕೆಟ್ ಕುಮಾರ್ ಬಂಗಾರಪ್ಪಗೋ..? ರಾಜೂಗೋ?
NAMMUR EXPRESS NEWS
ಶೃಂಗೇರಿ: ಗೋಮಾಳದ ಪ್ರದೇಶವೇನಾದರೂ ಅರಣ್ಯ ಇಲಾಖೆಗೆ ಸೇರಿದರೆ ಶಾಸಕರನ್ನು ಕೊಲೆ ಮಾಡುವುದಾಗಿ ಅನೇಕರು ಬೆದರಿಕೆ ಹಾಕಿದ್ದಾರೆ ಎಂದು ಶಾಸಕರೇ ಆತಂಕ ವ್ಯಕ್ತಪಡಿಸಿದ್ದಾರೆ.
ಗೋಮಾಳ, ಕಾನು ಅರಣ್ಯಕ್ಕೆ ಸೇರಿಸುವ ಪ್ರಯತ್ನವು ಇಲಾಖೆಯಿಂದ ನಡೆದಿದೆ, ಇದರಿಂದಾಗಿ ಶೃಂಗೇರಿ ಭಾಗದ ಜನರು ಆತಂಕದಲ್ಲಿದ್ದಾರೆ, ಜಾಗವು ಅರಣ್ಯಕ್ಕೆ ಸೇರಿದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಭಾರೀ ವಿವಾದ ಸೃಷ್ಟಿ ಮಾಡಿದೆ.
ರಾಜೇಗೌಡ ಮಾತನಾಡಿ, ಸರ್ಕಾರ ಮಧ್ಯ ಪ್ರವೇಶಿಸಿ ಮಲೆನಾಡು ಭಾಗದಲ್ಲಿರುವ ಸೊಪ್ಪಿನ ಬೆಟ್ಟ, ಗೋಮಾಳಗಳ ಜಾಗಕ್ಕೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ಪರಿಹರಿಸಬೇಕು, ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದ್ದರೂ ಬೆದರಿಕೆ ಹಾಕಿದವರ ಹೆಸರು ಹೇಳಲ್ಲ, ಅವರ ವಿರುದ್ಧ ದೂರನ್ನೂ ದಾಖಲಿಸುವುದಿಲ್ಲ. ಆದ್ರೆ ಸಮಸ್ಯೆ ಬಗೆ ಹರಿಯದಿದ್ದರೆ ತೊಂದರೆ ಆಗಲಿದೆ ಎಂಬುದಾಗಿ ಪ್ರತಿಕ್ರಿಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೇರಿದಂತೆ ಪ್ರಮುಖ ಅಧಿಕಾರಿಗಳಿದ್ದ ಸಭೆಯಲ್ಲೇ ಈ ಬಗ್ಗೆ ರಾಜೇಗೌಡ ಹೇಳಿ ಕೊಂಡಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ಗೋಮಾಳ ಜಾಗವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ, ಈ ಪ್ರದೇಶಗಳಲ್ಲಿ ವಾಸಿಸುವ ಜನರು ಆತಂಕದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.
ತನಿಖೆ ನಡೆಸುತ್ತೇವೆ: ಎಸ್ಪಿ:
ಶಾಸಕರಿಗೆ ಬಂದಿರುವ ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಶಾಸಕ ರಾಜೇಗೌಡ ದೂರು ನೀಡಿದರೆ ಉನ್ನತ ತನಿಖೆ ಮಾಡಿಸುತ್ತೇವೆ ಎಂದು ಚಿಕ್ಕಮಗಳೂರು ಎಸ್ಪಿ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ರಾಜಕೀಯ ಹೊಸ ಇನ್ನಿಂಗ್ಸ್!
- ಹೆಸರು ಬದಲಾವಣೆಗೆ ಮುಂದಾದರೇ ಕೇಂದ್ರ ಸಚಿವೆ
ರಾಜ್ಯ ರಾಜಕೀಯದಿಂದ ಕೇಂದ್ರ ಸಚಿವರಾಗುವ ಮಟ್ಟಿಗೆ ಬೆಳೆದಿರುವ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಪ್ರಸ್ತುತ ಇರುವ ‘ಕರಂದ್ಲಾಜೆ’ ಬದಲಿಗೆ ‘ಗೌಡ’ ಸೇರಿಸಲು ಪ್ರಕ್ರಿಯೆ ನಡೆಯುತ್ತಿದೆ. ಎಂದು ವರದಿಯಾಗಿದ್ದು, ಮುಂದೆ ಅವರ ಹೆಸರು ‘ಶೋಭಾ ಗೌಡ’ ಆಗುವ ಸಾಧ್ಯತೆ ಇದೆ. ಹೆಸರು ಬದಲಾವಣೆಗೆ ಜ್ಯೋತಿಷಿಗಳ ಸಲಹೆಯೋ? ಸಂಖ್ಯಾಶಾಸ್ತ್ರವೋ? ಅಥವಾ ದೆಹಲಿ ಮೂಲದ ನಾಯಕರ ಸಲಹೆಯೋ ಎಂಬ ಅನುಮಾನವು ಇದೆ. ಬಿಜೆಪಿಯಲ್ಲಿ ಒಂದು ವರ್ಗದ ಪ್ರಕಾರ 2023ರ ಚುನಾವಣೆಗೆ ತಯಾರಿ ನಡೆಸಿ ಶೋಭಾ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. ಕರಂದ್ಲಾಜೆ ಬದಲಿಗೆ ಗೌಡ ಸೇರಿಸಿ 2023ರ ಚುನಾವಣಾ ಅಖಾಡದಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಫ್ಯಾಕ್ಟರ್, ಕರಾವಳಿ ಭಾಗದಲ್ಲಿ ಹಿಂದುತ್ವ ಫ್ಯಾಕ್ಟರ್ಗೆ ಕೈ ಹಾಕಿದ್ಯಾ ಬಿಜೆಪಿ ಹೈಕಮಾಂಡ್ ಎಂಬ ಅನುಮಾನ ಮೂಡಿದೆ.
ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ಅಂತ್ಯಗೊಂಡಿದೆ. ಇದೀಗ ಮುಂದಿನ ರಾಜ್ಯಾಧ್ಯಕ್ಷರ ರೇಸ್ನಲ್ಲಿ ಶೋಭಾ ಕರಂದ್ಲಾಜೆ ಕೂಡ ಇದೆ. ಈ ಹಿನ್ನೆಲೆ ಹೆಸರು ಬದಲಾವಣೆ ಸಾಧ್ಯತೆ ಇದೆ.
ಕಮಲ ಹಿಡಿದ ಸೊರಬದ ನಾಯಕ ರಾಜು ತಲ್ಲೂರು - ಬಿಜೆಪಿ ಟಿಕೆಟ್ ಕುಮಾರ್ ಬಂಗಾರಪ್ಪಗೋ..? ರಾಜೂಗೋ?
ಕಾಂಗ್ರೆಸ್ ಪಕ್ಷ ತೊರೆದಿದ್ದ ಸೊರಬದ ಮುಖಂಡ ರಾಜು ತಲ್ಲೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ರಾಜು ಎಂ.ತಲ್ಲೂರು ಅವರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಶಾಲು ಹೊದಿಸಿ, ಬಿಜೆಪಿ ಧ್ವಜ ನೀಡಿ ರಾಜು ತಲ್ಲೂರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
ಬಿಜೆಪಿ ಸೇರ್ಪಡೆ ಆಗುತ್ತಿದ್ದಂತೆ ರಾಜು ತಲ್ಲೂರು ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದರು. ವಿನೋಬ ನಗರದಲ್ಲಿರುವ ಮನೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅವರು ಆಶೀರ್ವಾದ ಪಡೆದರು.