ಮಳೆ ಸುನಾಮಿಗೆ ಮಲೆನಾಡು ತತ್ತರ!
– ಒಂದೇ ಸಮನೆ ಸುರಿದ ಮಳೆಗೆ ನೂರಾರು ಕಡೆ ಜಲಾವೃತ
– ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಅಪಾರ ಹಾನಿ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇತುವೆ ಸಂಪರ್ಕ ಬಂದ್
NAMMUR EXPRESS NEWS
ಮಲೆನಾಡು: ಮಲೆನಾಡು ಭಾಗದಲ್ಲಿ ಮಳೆ ಸುನಾಮಿ ಸೃಷ್ಟಿ ಮಾಡಿದೆ. ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಸುರಿದ ಮಳೆಗೆ ಇಡೀ ಮಲೆನಾಡು ನಲುಗಿ ಹೋಗಿದೆ. ಇನ್ನು 3-4 ದಿನ ಮಳೆ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ ಪಟ್ಟಣ ಸಂಪೂರ್ಣ ನೀರಲ್ಲಿಮುಳುಗಿದಂತಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದಲ್ಲೇ ಚಿಕ್ಕಮಗಳೂರಿನ ದತ್ತಪೀಠದ ರಸ್ತೆಯಲ್ಲಿ 3 ಅಡಿ ಎತ್ತರದಲ್ಲಿ ನೀರು ಹರಿದಿದೆ. ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕೆರೆಯಂತೆ ನೀರು ಹರಿಯುತ್ತಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆ ಆಗಿದ್ದಾರೆ. ನದಿಗಳು ಒಂದೇ ದಿನಕ್ಕೆ ತುಂಬಿವೆ.
ಶಿವಮೊಗ್ಗ ಜಿಲ್ಲಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶಗಳು ಮತ್ತು ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ನಲ್ಲಿ ರಾಜಾ ಕಾಲುವೆ, ಚರಂಡಿಳು ತುಂಬಿ ನೀರು ಹೊರಗೆ ಹರಿಯುತ್ತಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆ, ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದು ಆಸ್ತಿಪಾಸ್ತಿ ಹಾನಿಯಾಗಿದೆ. ಅನೇಕ ಬಡಾವಣೆಗಳು ನೀರಲ್ಲಿ ಮುಳುಗಿವೆ.
ಶಿವಮೊಗ್ಗ, ತೀರ್ಥಹಳ್ಳಿ, ತರೀಕೆರೆ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಹೊಲ- ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ಪಟ್ಟಣದಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಮನೆ, ಕಚೇರಿಗಳಿಗೆ ನೀರು ನುಗ್ಗಿದೆ. ರಸ್ತೆ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಕಾಫಿ ನಾಡಲ್ಲಿ ಮಾರಿ ಮಳೆ!
ಕಾಫಿನಾಡ ಮಹಾಮಳೆಗೆ ಮಲೆನಾಡು ಭಾಗದ ಜನರು ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತಗೊಂಡಿದೆ. ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನ ಹಳ್ಳ ದಾಟಲು ಪರದಾಡಿದರು. ವೃದ್ದೆಯನ್ನ ಹಳ್ಳಿಗರು ಅಂಗೈಲಿ ಹೊತ್ತು ಸಾಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದೆ. ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಇದಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು, ಕಿರು ಸೇತುವೆ ತುಂಬಿ ಹೋಗಿದೆ.
ಶಿವಮೊಗ್ಗ ನಗರದಲ್ಲಿ ಅಪಾರ ಹಾನಿ
ರಸ್ತೆ ಮೇಲೆ ನೀರು ಹರಿಯುತ್ತಿದೆ. ಬೈಕು, ಕಾರುಗಳು ನೀರಿನಲ್ಲಿ ಮುಳುಗಿವೆ. ಮನೆಗಳು, ಮಳಿಗೆಗಳಿಗು ನೀರು ನುಗ್ಗಿದೆ. ದಿನ ಬಳಕೆ ವಸ್ತುಗಳು, ಪೀಠೋಪಕರಣಗಳು ಹಾನಿಯಾಗಿವೆ.
ಕಂಡುಕೇಳರಿಯದ ಹಿಂಗಾರು ಮಳೆ!
ಕಂಡುಕೇಳರಿಯದ ಹಿಂಗಾರು ಮಳೆಗೆ ಕಾಫಿನಾಡು ತತ್ತರಿಸಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೂ ತೀವ್ರ ತೊಂದರೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಮಳೆಗೆ ರಾಜ್ಯದ ಅತ್ಯಂತ ಎರಡನೇ ಎತ್ತರದ ಪ್ರದೇಶವಾದ ಮುಳ್ಳಯ್ಯನಗಿರಿಯಲ್ಲಿ ಸುಮಾರು 2 ಅಡಿಯಷ್ಟು ನೀರು ರಸ್ತೆ ಮೇಲೆ ಹರಿದಿದೆ. ಇದರಿಂದ ಪ್ರವಾಸಿಗರು,ಸ್ಥಳೀಯರು ಆತಂಕಗೊಂಡಿದ್ದಾರೆ.ಈ ಮಧ್ಯೆ ಗಿರಿಯಲ್ಲಿ ಭೂಕುಸಿತದ ಭೀತಿ ಎದುರಾಗಿದೆ. ಮಲೆನಾಡಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.