ಟಾಪ್ 4 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಮೈಕ್ರೋ ಫೈನಾನ್ಸ್ ಸಾಲ ತೀರಿಸಲಾಗದೇ ಊರನ್ನೇ ಬಿಟ್ಟ ಯುವಕ
– ಚಿಕ್ಕಮಗಳೂರು : ಚಾರ್ಮಾಡಿ ಘಾಟ್ ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ಕಾಡ್ಗಿಚ್ಚು
– ಶಿವಮೊಗ್ಗ : ಕಳ್ಳತನ ಪ್ರಕರಣದಲ್ಲಿ ಶಿಕಾರಿಪುರ ನಿವಾಸಿಯೊಬ್ಬರೊಬ್ಬನ್ನು 15 ವರ್ಷಗಳ ಬಳಿಕ ಅರೆಸ್ಟ್
– ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ
NAMMUR EXPRESS NEWS
ಶಿವಮೊಗ್ಗ : ಫೈನಾನ್ಸ್ನಲ್ಲಿ ಸಾಲ ಪಡೆದು ತೀರಿಸಲು ಆಗದೇ ಹಲವರು ಪ್ರಾಣ ಕಳೆದುಕೊಂಡಿರುವ ಸುದ್ದಿ ರಾಜ್ಯಾದಾದ್ಯಂತ ಸದ್ದು ಮಾಡುತ್ತಿದ್ದು, ಶಿವಮೊಗ್ಗದಲ್ಲಿ ಫೈನಾನ್ಸ್ ಮಾಫಿಯಾ ಕಿರುಕುಳ ತಾಳಲಾರದೇ ಯುವಕನೊಬ್ಬ ಕುಟುಂಬವನ್ನೇ ತೊರೆದು ಊರು ಬಿಟ್ಟಿದ್ದಾನೆ. ದಿನದ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ, ಚಕ್ರ ಬಡ್ಡಿ ಕಟ್ಟಲಾಗದೆ ಯುವಕ ಕಂಗಲಾಗಿದ್ದ. ಹೀಗಾಗಿ ತನ್ನ ದುಡಿಮೆಗಾಗಿ ಮಾಡಿಕೊಂಡಿದ್ದ ಹೇರ್ಕಟಿಂಗ್ ಸಲೂನ್ ಕೂಡ ಮಾರಾಟ ಮಾಡಿದ್ದ. ಮಗ ಮಾಡಿದ ಸಾಲಕ್ಕೆ ತಂದೆ ಹೈರಾಣಾಗಿದ್ದು, ಮಗ ಮಾರಾಟ ಮಾಡಿದ ಸಲೂನ್ನಲ್ಲಿ ಅಪ್ಪ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ತಂದೆ ಮಗ ಇಬ್ಬರು ಸೇರಿ ಎನ್.ಟಿ.ರಸ್ತೆಯಲ್ಲಿ ಎರಡು ವರ್ಷದ ಹಿಂದೆ ಮಾಸ್ಟರ್ಕಟ್ ಸಲೂನ್ ಹೆಸರಿನ ಹೇರ್ಕಟಿಂಗ್ ಅಂಗಡಿ ತೆರೆದಿದ್ದರು. ಅಂಗಡಿ ಮಾಡಲು ಸ್ವಲ್ಪ ಸಾಲ ಮಾಡಿಕೊಂಡಿದ್ದ ಮಗ ಶ್ರೀನಿವಾಸ್ ನಂತರ ಆ ಸಾಲ ತೀರಿಸಲು ಫೈನಾನ್ಸ್ಗಳ ಬಳಿ ಸಾಲ ಮಾಡಿದ್ದ. ಬಳಿಕ ಪ್ರತಿ ದಿನ ದುಡಿದರು ಬಡ್ಡಿ ಕಟ್ಟಲಾಗದೆ ಬಡ್ಡಿ ಮಾಫಿಯಾದ ಕಿರುಕುಳಕ್ಕೆ ಒಳಗಾಗಿದ್ದ. ಬಡ್ಡಿ ಮಾಫಿಯಾದ ಕಿರುಕುಳದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಚೆಗೆಗೆ ಫೈನಾನ್ಸ್ನವರು ಸಾಲ ಕಟ್ಟುವಂತೆ ಒತ್ತಡಹಾಕುತ್ತಿದ್ದರು. ಮೈಕ್ರೋ ಫೈನಾನ್ಸ್ ಮೀಟರ್ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ, ದಿನದ ಬಡ್ಡಿ ಕಟ್ಟಿ ಸುಸ್ತಾಗಿದ್ದ ಶ್ರೀನಿವಾಸ್ ಫೈನಾನ್ಸ್ನವರ ಕಿರುಕುಳಕ್ಕೆ ಬೆದರಿ ಆರು ತಿಂಗಳ ಹಿಂದೆ ತನ್ನ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಪತ್ನಿ, ಮಕ್ಕಳು, ವಯೋವೃದ್ಧ ತಂದೆ – ತಾಯಿಯನ್ನು ತೊರೆದು ಊರು ಬಿಟ್ಟಿದ್ದಾನೆ. ಶ್ರೀನಿವಾಸ್ ಊರು ಬಿಟ್ಟರು ಆತನ ತಂದೆಗೆ ಮೀಟರ್ಬಡ್ಡಿ ಸಾಲಗಾರರ ಕಾಟ ತಪ್ಪಿಲ್ಲ. ಪ್ರತಿನಿತ್ಯ ಅಂಗಡಿ ಮತ್ತು ಮನೆಯ ಬಳಿ ಬಂದು ಕಿರುಕುಳ ನೀಡುತ್ತಿದ್ದಾರೆ. ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದ ಮಗ ಎಲ್ಲಿದ್ದಾನೆಂದು ಗೊತ್ತಿಲ್ಲ ಎಂದು ಶ್ರೀನಿವಾಸ್ ತಂದೆ ಕಣ್ಣೀರು ಹಾಕುತ್ತಿದ್ದಾರೆ. ನಾವು ಮೊಬೈಲ್ಗೆ ಫೋನ್ ಮಾಡಿದರು ಎತ್ತುತ್ತಿಲ್ಲ. ಆತನ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ಕೂಡ ನಮ್ಮ ಮೇಲೆ ಬಿದ್ದಿದೆ ಎಂದು ಶ್ರೀನಿವಾಸ್ ತಂದೆ ಅಳಲು ತೋಡಿಕೊಂಡರು. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶ್ರೀನಿವಾಸನ ತಂದೆ -ತಾಯಿಗಳು ಕಳೆದ ಆರು ಏಳು ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ತಂದೆ ಹೇರ್ಕಟಿಂಗ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ ಹೋಟೆಲ್ ಗೆ ಪಾತ್ರೆ ತೊಳೆಯಲು ಹೋಗುತ್ತಾರೆ.
– ಚಿಕ್ಕಮಗಳೂರು : ಚಾರ್ಮಾಡಿ ಘಾಟ್ ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ಕಾಡ್ಗಿಚ್ಚು
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಅರಣ್ಯಕ್ಕೆ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಗುಡ್ಡಕ್ಕೆ ಏರಿರುವ ಬೆಂಕಿ ನಂದಿಸಲು ಸಾಧ್ಯವಾಗದೆ ಪರದಾಡಿದರು. ಬೆಂಕಿಯ ಕೆನ್ನಾಲಿಗೆ 10ಕಿ.ಲೋ ಮೀಟರ್ ದೂರಕ್ಕೂ ಕಾಣಿಸುತ್ತಿದೆ. ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಬೆಂಕಿ ಹೊತ್ತಿಕೊಂಡು ಎರಡು ಗಂಟೆ ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಈ ಭಾಗದಲ್ಲಿ ವನ್ಯಜೀವಿ ಮತ್ತು ಸಸ್ಯ ಸಂಪತ್ತು ಅಪಾರ ಪ್ರಮಾಣದಲ್ಲಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಪರದಾಡಿದರು.
– ಶಿವಮೊಗ್ಗ : ಕಳ್ಳತನ ಪ್ರಕರಣದಲ್ಲಿ ಶಿಕಾರಿಪುರ ನಿವಾಸಿಯೊಬ್ಬರೊಬ್ಬನ್ನು 15 ವರ್ಷಗಳ ಬಳಿಕ ಅರೆಸ್ಟ್
ಶಿವಮೊಗ್ಗ: ಉಡುಪಿಯ ಪಡುಬಿದ್ರಿ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ನಿವಾಸಿಯೊಬ್ಬರೊಬ್ಬನ್ನು 15 ವರ್ಷಗಳ ಬಳಿಕ ಅರೆಸ್ಟ್ ಮಾಡಿದ್ದಾರೆ. ಶಿಕಾರಿಪುರ ನಿವಾಸಿ ರಮೇಶ್ ಬಂದಿತ ಆರೋಪಿ. ಈತನ ವಿರುದ್ಧ 2010 ರಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಬಂಧಿಯಾಗಿದ್ದ ಈತ ಜೈಲಿನಿಂದ ಬಿಡುಗಡೆಯಾದ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಎರಡು ಪ್ರಕರಣಗಳಲ್ಲಿ ಅವರ ವಿರುದ್ಧ ಎಲ್ಪಿಸಿ ವಾರಂಟ್ಗಳನ್ನು ಹೊರಡಿಸಲಾಗಿತ್ತು. ತತ್ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನಲ್ಲಿ ಪತ್ತೆಹಚ್ಚಿ ಅರೆಸ್ಟ್ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
– ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ದಿನನಿತ್ಯ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನ ಹಾನಿ ಮಾಡ್ತಿವೆ. ಕಾಡಾನೆಗಳ ಉಪಟಳಕ್ಕೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದು, ಕಾಡಾನೆಗಳನ್ನ ಸ್ಥಳಾಂತರಿಸುವಂತೆ ಅರಣ್ಯಾಧಿಕಾರಿ ಎಷ್ಟೇ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗ್ತಿಲ್ಲ.ಕಷ್ಟಪಟ್ಟು ಬೆಳೆದ ಬೆಳೆಗಳು ಮಣ್ಣು ಪಾಲು ಆಗುತ್ತಿದೆ ಎಂದು ರೈತರು ಅರಣ್ಯಾಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಾಗೋಡು, ಗವಿಗದ್ದೆ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ಗ್ರಾಮದಲ್ಲಿ ಒಂಟಿ ಸಲಗ ಸಂಚಾರ ಮಾಡಿದ್ದು, ಗ್ರಾಮದ ಜನರು ಕಂಗಲಾಗಿದ್ದಾರೆ.