ಟಾಪ್ 5 ನ್ಯೂಸ್ ಮಲ್ನಾಡ್
– ಮನೆಯ ಸೂಟ್ ಕೇಸಲ್ಲಿ ಕಾಳಿಂಗ ಸರ್ಪ!
– ತೀರ್ಥಹಳ್ಳಿಯ ಉಂಟೂರು ಕಟ್ಟೆ ಬಳಿ ಘಟನೆ
– ಹುಂಚ: ಮನೆ ಮುಂಭಾಗ ನಿಲ್ಲಿಸಿದ್ದ ಟ್ರ್ಯಾಕ್ಟರ್, ಬೈಕಿಗೆ ಬೆಂಕಿ
– ರಿಪ್ಪನ್ಪೇಟೆ: ಬೈಕ್ ಹಾಗೂ ಕಾರು ಡಿಕ್ಕಿ:ಓರ್ವ ಯುವಕ ಸಾವು
– ಸಾಗರ: ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ
– ಹೊಸನಗರ: ಅಪಘಾತದಲ್ಲಿ ಗಾಯಗೊಂಡಿದ್ದವರು ಸಾವು
NAMMUR EXPRESS NEWS
ತೀರ್ಥಹಳ್ಳಿ: 11 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿಟ್ಟಿದ್ದ ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಮನೆಯ ಟ್ರಂಕ್ನಲ್ಲಿದ್ದ ಹಾವನ್ನು ಕಂಡು ಗಾಬರಿಯಾದ ಮನೆಯವರು ಆ ಬಳಿಕ ಉರಗ ಸಂರಕ್ಷಕರ ಮೂಲಕ ಸರ್ಪವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ. ತೀರ್ಥಹಳ್ಳಿಯ ಊಂಟೂರುಕಟ್ಟೆ ಸಮೀಪದ ಕಟ್ಟೆಕೊಪ್ಪದ ಬಳಿ ಇರುವ ಮುನಿಯಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಮನೆಯಲ್ಲಿದ್ದ ಟ್ರಂಕ್ನಲ್ಲಿ ಕಳೆದ ಭಾನುವಾರ ರಾತ್ರಿ ಹಾವು ಸೇರಿರುವುದು ಗೊತ್ತಾಗಿದೆ. ಕೆರೆ ಹಾವೊಂದನ್ನ ಅಟ್ಟಿಸಿಕೊಂಡು ಬಂದ ಕಾಳಿಂಗ ಮನೆಯೊಳಗೆ ನುಗ್ಗಿದೆ. ಆ ಬಳಿಕ ಭಯಗೊಂಡು ಅಲ್ಲಿಯೇ ಇದ್ದ ಸೂಟ್ಕೇಸ್ನೊಳಗೆ ಸೇರಿಕೊಂಡಿತ್ತು. ಇದರಿಂದ ಮನೆಯವರು ಗಾಬರಿಯಾದರು. ಬಳಿಕ ಮನೆಯವರು ಉರಗ ಸಂರಕ್ಷಕ ಚಂದ್ರು ಹಾಗೂ ನರೇಶ್ ಅವರನ್ನಿ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅವರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಅದನ್ನು ಬಿಡುಗಡೆ ಮಾಡಿದ್ದಾರೆ.
– ಹುಂಚ: ಮನೆ ಮುಂಭಾಗ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಹುಂಚ : ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಟ್ರ್ಯಾಕ್ಟರ್ ಹಾಗೂ ಒಂದು ಬೈಕ್ ಗೆ ಕಿಡಿಗೇಡಿಗಳು ರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಸಗದ್ದೆ ಗ್ರಾಮದಲ್ಲಿ ನಡೆದಿದೆ. ಹೊಸಗದ್ದೆ ಗ್ರಾಮದ ಲತೇಶ್ ಎಂಬುವವರು ತಮ್ಮ ಮನೆಯ ಮುಂಭಾಗದಲ್ಲಿ ಎರಡು ಟ್ರ್ಯಾಕ್ಟರ್ ಹಾಗೂ ಒಂದು ಬೈಕ್ ನ್ನು ನಿಲ್ಲಿಸಿದ್ದರು. ತಡರಾತ್ರಿ ಯಾರೋ ಕಿಡಿಗೇಡಿಗಳು ಟ್ರ್ಯಾಕ್ಟರ್ ಹಾಗೂ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ಹತ್ತಿಕೊಂಡು ಶಬ್ದವಾದ ಹಿನ್ನಲೆಯಲ್ಲಿ ಮನೆಯಿಂದ ಹೊರಬಂದ ಲತೇಶ್ ಹಾಗೂ ಕುಟುಂಬಸ್ಥರು ಬೆಂಕಿಯನ್ನು ಆರಿಸಿದ್ದಾರೆ. ಕೂಡಲೇ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ರಿಪ್ಪನ್ಪೇಟೆ: ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಓರ್ವ ಯುವಕ ಸಾವು
ರಿಪ್ಪನ್ಪೇಟೆ : ಸೂಡೂರು ಗೇಟ್ ಬಳಿಯ ದೇವಸ್ಥಾನದ ತಿರುವಿನಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಮೂವರು ಯುವಕರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾರುತಿ ಅಲ್ಟೋ ಕಾರು ಹಾಗೂ ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಯುವಕರು ಗಾಯಗೊಂಡಿದ್ದರು. ಕಳಸ ಗ್ರಾಮದ ಮನೋಜ್ (19) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ. ಕೆಂಚನಾಲ ಗ್ರಾಮದ ಅಕ್ಷಯ್ ಎಂಬ ಯುವಕನಿಗೆ ಕಾಲು ಮುರಿತವಾಗಿದ್ದು ಸ್ಥಿತಿ ಗಂಭೀರವಾಗಿದೆ, ರಿಪ್ಪನ್ಪೇಟೆ ತೀರ್ಥಹಳ್ಳಿ ರಸ್ತೆ ನಿವಾಸಿ ಮನ್ವಿತ್ ಭಂಡಾರಿ ಗೆ ಕಾಲು ಮುರಿತವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಗಾರದಲ್ಲಿಸಲಾಗಿದೆ.
– ಸಾಗರ: ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಗರದ ಬೇಕರಿ ಮಾಲೀಕ
ಸಾಗರ : ಬಿ.ಹೆಚ್ ರಸ್ತೆಯ ಖಾಸಗಿ ಲಾಡ್ಜ್ನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿರಸಿ ಮೂಲದ ಜಿತೇಂದ್ರ (33) ಮೃತ ವ್ಯಕ್ತಿತಾಗಿದ್ದು ಈತನು ಹೊಸನಗರ ತಾಲ್ಲೂಕಿನ ನಗರದಲ್ಲಿ ಸ್ವಾದಿಷ್ಟ ಬೇಕರಿಯನ್ನು ನಡೆಸುತ್ತಿದ್ದನು. ಶವದ ಬಳಿ ಡೆತ್ನೋಟ್ ದೊರೆತ್ತಿದ್ದು, ಶವವನ್ನು ಸಾಗರದ ಸರ್ಕಾರಿ ಉಪವಿಭಾಗಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಜಿತೇಂದ್ರ ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಹೊಸನಗರ: ಅಪಘಾತದಲ್ಲಿ ಗಾಯಗೊಂಡಿದ್ದ ನಾಗರಕೊಡಿಗೆ ಮಹೇಶ್ ಗೌಡ ನಿಧನ
ಹೊಸನಗರ : ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿಯ ಗೊರಗೋಡಿನ ದಿ. ಗಂಗಾಧರಪ್ಪ ಗೌಡರ ಪುತ್ರ ಮಹೇಶಗೌಡ (56) ಕಾರ್ಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅಡಿಕೆ ಕೊಯ್ಲು ಕತ್ತಿ ರಿಪೇರಿ ಮಾಡಿಸಿ ಮನೆಗೆ ಹಿಂದಿರುಗುತಿದ್ದಾಗ ಕಾರಣಗಿರಿ ಬಳಿಯಲ್ಲಿ ಏಕಾಏಕಿ ಜಾನುವಾರುಗಳು ಅಡ್ಡ ಬಂದು ಅವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಹೇಶಗೌಡರನ್ನು ಹೊಸನಗರದಲ್ಲಿ ಚಿಕಿತ್ಸೆಗೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮಹೇಶಗೌಡ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು-ಬಳಗದವರು ಸ್ನೇಹಿತ ವರ್ಗದವರನ್ನು ಅಗಲಿದ್ದಾರೆ.