ಟಾಪ್ 5 ನ್ಯೂಸ್ ಮಲ್ನಾಡ್
– ಹೊಸನಗರ : ಶ್ರೀಗಂಧ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್!
– ಶಿಕಾರಿಪುರ: ಕುಡುಗೋಲಿನಿಂದ ಚುಚ್ಚಿ ಮಗನ ಕೊಲೆಗೈದ ತಂದೆ
– ಸಾಗರ: ಒಂಟಿ ಮನೆಯಲ್ಲಿ ಮಹಿಳೆಗೆ ಚಾಕು ತೋರಿಸಿ ದರೋಡೆ
– ಸಾಗರ: ಕೊಟ್ಟಿಗೆಯಲ್ಲಿ ಇದ್ದ ದನಗಳನ್ನ ತಿಂದ ಚಿರತೆ!
– ಶಿವಮೊಗ್ಗ: ಮೀಟರ್ ಬಡ್ಡಿ ದಂಧೆಗೆ ಮಾಜಿ ಕಾರ್ಪೋರೇಟರ್ ಬಲಿ!
NAMMUR EXPRESS NEWS
ಹೊಸನಗರ : ಶ್ರೀಗಂಧದ ಮರದ ತುಂಡನ್ನು ಅಕ್ರಮವಾಗಿ ಸಾಗಿಸುತಿದ್ದ ಆರೋಪಿಯೋರ್ವನನ್ನು ಮಾಲುಸಮೇತ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಲ್ಲಿ ನಡೆದಿದೆ. ಕಚ್ಚಿಗೆ ಬೈಲ್ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. ಹನೀಫ್ ಬಿನ್ ಯಾಕೂಬ್ ಸಾಬ್ ವಯಸ್ಸು 48ವರ್ಷ ಬಾನಿಗಾ ವಾಸಿ ಹೊಸಕೇಸರಿ ಗ್ರಾಮ ಹೊಸನಗರ ತಾಲೂಕು ಇವನಿಂದ 3ಕೆಜಿ 400ಗ್ರಾಂ(3.400ಗ್ರಾಂ )ಹಸಿ ಗಂಧದ ಪೀಸ್ ಹಾಗೂ 3ಗರಗಸವನ್ನು ವಶಕ್ಕೆ ಪಡೆಯಲಾಗಿದೆ. ಸದರಿ ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಸಬ್ ಇನ್ಸ್ಪೆಕ್ಟರ್ ವಿನಾಯಕ ಹಾಗೂ ಅವರ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಮಾನ್ಯ ವಲಯ ಅರಣ್ಯಧಿಕಾರಿ ಅನಿಲ್ ಕುಮಾರ್ ಎಸ್ ಹೊಸನಗರ, dyrfo ಆದ ಅನಿಲ್ ಬೆಳ್ಳೆನವರ್, ರಾಘವೇಂದ್ರ ಗೌಡ ಅರಣ್ಯ ರಕ್ಷಕ, ಪುಟ್ಟಸ್ವಾಮಿ, ರಮೇಶ್, ಸುರೇಶ್ ಅರಣ್ಯ ರಕ್ಷಕ ಇವರು ಪಾಲ್ಗೊಂಡಿದ್ದು, ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
– ಶಿಕಾರಿಪುರ: ಕುಡುಗೋಲಿನಿಂದ ಚುಚ್ಚಿ ಮಗನ ಕೊಲೆಗೈದ ತಂದೆ
ಶಿಕಾರಿಪುರ: ತಾಲೂಕಿನ ಬಳ್ಳೂರು ಗ್ರಾಮದಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗಾನಾಯ್ಕ್ ಕೊಲೆಯಾದ ವ್ಯಕ್ತಿ. ಆತನ ತಂದೆ ಲಿಂಗಾನಾಯ್ಕ್ ಜೊತೆಗೆ ಆಸ್ತಿ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಲಿಂಗಾನಾಯ್ಕ್ ಕುಡಗೋಲಿನಿಂದ ಮಗನ ಎದೆ ಭಾಗಕ್ಕೆ ಚುಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಗಂಗಾನಾಯ್ಕ್ ಮೃತಪಟ್ಟಿದ್ದಾನೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಡಿವೈಎಸ್ಪಿ ಕೇಶವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಸಾಗರ: ಒಂಟಿ ಮನೆಯಲ್ಲಿ ಮಹಿಳೆಗೆ ಚಾಕು ತೋರಿಸಿ ದರೋಡೆ
ಸಾಗರ: ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಬಾರಗುಂಡಿ ಗ್ರಾಮದ ಒಂಟಿಮನೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಾರಗುಂಡಿ ಗ್ರಾಮದಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಚಾಕು ತೋರಿಸಿ, ಕೋಣೆಯಲ್ಲಿ ಕೂಡಿ ಹಾಕಿ ಮಾಂಗಲ್ಯ ಸರ, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾ ಗಿದ್ದನು. ಈ ಸಂಬಂಧ ಮಹಿಳೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರಿನ ಬಿಡದಿ ಹತ್ತಿರದ ಕೆಂಚನಗುಪ್ಪೆ ಮರ್ದಮ್ಮ ದೇವಸ್ಥಾನದ ಬಳಿ ವಾಸವಿದ್ದ ಟೋಯೋಟೋ ಕಂಪನಿಯಲ್ಲಿ ಮಿಷನ್ ಆಪರೇಟರ್ ಅಗಿ ಕೆಲಸ ಮಾಡುತ್ತಿದ್ದ ಪವನ್ ಎಚ್.ಎಸ್. ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 40 ಗ್ರಾಂ ತೂಕದ 278231 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಮಾಂಗಲ್ಯ ಸರವನ್ನು ರಾಮನಗರ ಜಿಲ್ಲೆ ಬಿಡದಿಯ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ನಿಂದ ವಶಕ್ಕೆ ಪಡೆಯಲಾಗಿದೆ.
– ಸಾಗರ: ಕೊಟ್ಟಿಗೆಯಲ್ಲಿ ಇದ್ದ ದನಗಳನ್ನ ತಿಂದ ಚಿರತೆ
ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಇಡುವಾಣಿ ಕೊಳಚಗಾರು ಗ್ರಾಮದ ಗಣೇಶ್ ಗೋವಿಂದ ಮನೆಯಲ್ಲಿ ಕೊಟ್ಟಿಗೆಯಲ್ಲಿ ಇದ್ದಂತ ಮೂರು ದನಗಳನ್ನು ಚಿರತೆ ತಿಂದು ಹಾಕಿದೆ. ಜಾನುವಾರು ಕಳೆದುಕೊಂಡಂತ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಇಡುವಾಣೆ ಮತ್ತು ಕೊಳಚಗಾರು ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದೆ. ಚಿರತೆ ಹಿಡಿಯಲು ಕ್ರಮ ಕೈಗೊಳ್ಳುವಂತೆಯೂ ಅರಣ್ಯ ಇಲಾಖೆಗೆ ಎಚ್ಚರಿಸಿತ್ತು. ನಿನ್ನೆ ರಾತ್ರಿ ಕೊಟ್ಟಿಗೆಯಲ್ಲಿದ್ದಂತ ದನ ಮತ್ತು ಕರುಗಳನ್ನು ಚಿರತೆಯೊಂದು ಹೊತ್ತೊಯ್ದು, ಸಮೀಪದ ಕಾಡಿನಲ್ಲಿ ತಿಂದು ಹಾಕಿದೆ. ಮೂರು ದನಗಳನ್ನು ಚಿರತೆ ಹೊತ್ತೊಯ್ದು ತಿಂದು ಹಾಕಿದ ಕಾರಣ, ಮಾಲೀಕ ಕಂಗಾಲಾಗಿದ್ದಾರೆ. ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ನೀಡುವಂತೆಯೂ ಆಗ್ರಹಿಸಿದ್ದಾರೆ. ಈಗ ಮೂರು ಜಾನುವಾರುಗಳನ್ನು ಚಿರತೆಗೆ ಆಹಾರವಾಗಿವೆ. ಕಾಡಂಚಿನ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಚಿರತೆಯಿಂದ ಹೆಚ್ಚಾಗಿದೆ. ಜಾನುವಾರುಗಳ ನಂತರ ಮನುಷ್ಯರ ಮೇಲೆ ದಾಳಿ ಮಾಡೋಕು ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು. ಜನರ ಮೇಲೆ ದಾಳಿ ಮಾಡೋ ಮುನ್ನವೇ ಚಿರತೆಯನ್ನು ಹಿಡಿಯುವ ಕೆಲಸ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
– ಶಿವಮೊಗ್ಗ:- ಮೀಟರ್ ಬಡ್ಡಿ ದಂಧೆಗೆ ಮಾಜಿ ಕಾರ್ಪೋರೇಟರ್ ಬಲಿ
ಶಿವಮೊಗ್ಗ : ನಗರಸಭಾ ಮಾಜಿ ಸದಸ್ಯ, ಬಿಜೆಪಿ ಮುಖಂಡ ಆರ್.ಲಕ್ಷ್ಮಣ್ ಆತ್ಮಹತ್ಯೆಗೆ ಬಡ್ಡಿ ದಂಧೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ನಗರದಲ್ಲಿ ಮೀಟರ್ ಬಡ್ಡಿ ದಂಧೆ ಮಿತಿ ಮೀರಿದ್ದು ಇದೀಗ ಲಕ್ಷ್ಮಣ್ ಸಹ ಇದಕ್ಕೆ ಬಲಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇವರು ಶಿವಮೊಗ್ಗದ ಬಡ್ಡಿ ವ್ಯವಹಾರದಾರ ಮೋಹನ್ ಜಿ. ಎಂಬಾತನ ಬಳಿ ಸಾಲ ಮಾಡಿದ್ದರು. ಸಾಕಷ್ಟು ಬಡ್ಡಿ ನೀಡಿದ್ದರೂ ಕೂಡ ಮೋಹನ್ ಹಣಕ್ಕಾಗಿ ಬೇಡಿಕೆ ಇಟ್ಟು ನಂತರ ಕಿರುಕುಳ ನೀಡ ತೊಡಗಿದ್ದರು. ಇದನ್ನು ತಾಳಲಾರದೇ ಲಕ್ಷ್ಮಣ್ ಗೋಪಾಳದ ಪಾರ್ಕ್ನಲ್ಲಿ ನ. 22 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳೀಯರು ಲಕ್ಷ್ಮಣ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು. ಲಕ್ಷ್ಮಣ್ ಅವರ ಪುತ್ರ ಸಿ. ಪ್ರದೀಪ್ ಅವರು ತುಂಗಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನಮ್ಮ ತಂದೆಯ ಸಾವಿಗೆ ಜಿ. ಮೋಹನ್, ಅವರ ಪುತ್ರ ಪೃಥ್ವಿ ಹಾಗೂ ವೆಂಕಟೇಶ್ ಎನ್ನುವವರು ಕಾರಣರಾಗಿದ್ದು, ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.