-ಒಂದೇ ದಿನಕ್ಕೆ ಶಾಲೆ ಬಂದ್
-ವಿದ್ಯಾರ್ಥಿಗಳ ಜೊತೆಗೆ ಪೋಷಕರಿಗೂ ಆತಂಕ
ಚಿಕ್ಕಮಗಳೂರು, ಜನವರಿ 04: ಇಬ್ಬರು ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಶಾಲೆಗೆ ಬೀಗ ಹಾಕಲಾಗಿದೆ. ಶಾಲೆಯಲ್ಲಿ 15 ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಕಳಸ ತಾಲ್ಲೂಕಿನ ಜೆ. ಎಂ. ಇ. ಶಾಲೆಗೆ ಬೀಗ ಹಾಕಲಾಗಿದೆ. ಶಾಲೆಯಲ್ಲಿ 15 ಶಿಕ್ಷಕರಿದ್ದು, ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಉಳಿದ 13 ಶಿಕ್ಷಕರ ಪರೀಕ್ಷೆಯನ್ನು ಮಾಡಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ.
ಶಾಲೆಗಳು ಆರಂಭವಾದ ಬಳಿಕ ಒಂದು ದಿನ ಮಾತ್ರಾ ಶಾಲೆ ನಡೆದಿತ್ತು. ಮಕ್ಕಳು ಸಹ ಶಾಲೆಗೆ ಬಂದಿದ್ದರು.ಕೋವಿಡ್ ಪಾಸಿಟಿವ್ ಬಂದಿರುವ ಶಿಕ್ಷಕರು ಸಹ ಶಾಲೆಗೆ ಬಂದಿದ್ದರು. ಇದರಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪೋಷಕರಿಗೂ ಕೋವಿಡ್ ಸೋಂಕಿನ ಆತಂಕ ಉಂಟಾಗಿದೆ.
ಶಾಲೆಗೆ ಆಗಮಿಸುವ ಶಿಕ್ಷಕರ ಕೋವಿಡ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ಶಾಲೆಯ ಆಡಳಿತ ಮಂಡಳಿ ಶಿಕ್ಷಕರ ಕೋವಿಡ್ ವರದಿ ಕೈ ಸೇರುವ ಮುನ್ನವೇ ಅವರನ್ನು ಶಾಲೆಗೆ ಕರೆಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ.