ತಾನು ಎಸ್ಐ ಆಗಿದ್ದ ಠಾಣೆಯಲ್ಲೇ ಮಗಳಿಗೆ ಅಧಿಕಾರ ಕೊಟ್ಟ ತಂದೆ!
– ಮಂಡ್ಯ ಠಾಣೆಯಲ್ಲಿ ಅಪ್ಪ ಮಗಳ ಸೇವೆಗೆ ಜನರ ಸಾಕ್ಷಿ
– ಅಪ್ಪನ ವರ್ಗಾವಣೆ, ಮಗಳಿಗೆ ಅಧಿಕಾರ ಹಸ್ತಾಂತರ
NAMMUR EXPRESS NEWS
ಮಂಡ್ಯ: ತಾನು ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಠಾಣೆಯಲ್ಲಿ ತನ್ನ ಮಗಳಿಗೇ ಅಧಿಕಾರ ಹಸ್ತಾಂತರ ಮಾಡಿದ ಅಪರೂಪದ ಘಟನೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಏನಿದು ಘಟನೆ?:
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದ ಬಿ.ಎಸ್.ವೆಂಕಟೇಶ್ ಅವರು ತನ್ನ ಮಗಳೂ ಆದ ನೂತನ ಎಸ್ಐ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದು ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ಮಾತ್ರವಲ್ಲದೆ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ತಂದೆ ಮಗಳ ಪೊಲೀಸ್ ಸೇವೆಗೆ ಎಲ್ಲರ ಮೆಚ್ಚುಗೆ ವ್ಯಕ್ತಪಡಿಸಿದರು.
ವೆಂಕಟೇಶ್ ಅವರು ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
2022ರ ಬ್ಯಾಚ್ನಲ್ಲಿ ಪಿಎಸ್ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅವರ ಮೊದಲ ನಿಯೋಜನೆ ಕೂಡ ಮಂಡ್ಯದಲ್ಲೇ ಆಗಿದೆ. ಅದೂ ಕೂಡ ಅದೃಷ್ಟವೆಂಬಂತೆ ತನ್ನ ತಂದೆ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಸಿಕ್ಕಿದೆ. ಅಂತೆಯೇ ಅವರು ಠಾಣೆಯಲ್ಲಿ ಮಂಗಳವಾರ ತಂದೆಯಿಂದಲೇ ಅಧಿಕಾರ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023