Categories
ಮಂಡ್ಯ

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!

ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.!

– ಸ್ನಾನಘಟ್ಟ ಮುಳುಗಡೆ, ದೇವಸ್ಥಾನಕ್ಕೆ ಜಲದಿಗ್ಬಂಧನ
– ನೋಡುಗರ ಕಣ್ಣಿಗೆ ಮದ ನೀಡುತ್ತಿರುವ ನದಿಯ ರುದ್ರ ರಮಣೀಯ ದೃಶ್ಯ

NAMMUR EXPRESS NEWS

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದೆ. ಇನ್ನು ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ರುದ್ರ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ.

ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ!

ಒಂದು ಕಡೆ ಕಾವೇರಿ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ದೇವತೆ ಹಾಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಇದೇ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿ ಪ್ರವಾಹದ ಆತಂಕವನ್ನು ತಂದಿದೆ. ಕೆಆರ್‌ಎಸ್‌ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವು ಘಟನೆಗಳು ಜರುಗಿವೆ. ಒಂದು ಕಡೆ ಕಾವೇರಿ ನದಿ ಪಕ್ಕದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡು ಅಲ್ಲಿನ ಬೆಳೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ!

ಈ ಹಿನ್ನಲೆ ನದಿಗೆ ಇಳಿಯಲು ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣ ಕೋಟೆ ಗಣಪತಿ ದೇವಸ್ಥಾನ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ವಿಶ್ವೇಶ್ವರನಿಗೆ ಪೂಜೆ ಇಲ್ಲದ ಹಾಗೆ ಆಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸುಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಕಂಟಕ ಎದುರಾಗಿದೆ. ಅಪಾರ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟಿನ 25 ನಡುಗಡ್ಡೆಗಳ ಪೈಕಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿವೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಗಳಿಗೂ ಸಂಕಷ್ಟ ಎದುರಾಗಿದೆ. ಇದಲ್ಲದೇ ರಂಗನತಿಟ್ಟಿನ ವಾಕಿಂಗ್ ಪಾಥ್ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಈಗಾಗಲೇ ಬೋಟಿಂಗ್ ವ್ಯವಸ್ಥೆ ಸ್ಥಗಿತ ಮಾಡಲಾಗಿದ್ದು, ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಡಿಸಿ ಡಾ.ಕುಮಾರ, ಜಿಪಂ ಸಿಇಓ ತಸ್ವೀರ್ ಸೇರ್ ಆಸೀಫ್ ಭೇಟಿ ನೀಡಿದರು. ಮುಂದೆ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜೊತೆಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಿಂತನೆ ಮಾಡಲಾಯಿತು. ಒಟ್ಟಾರೆ ಕಾವೇರಿ ನದಿ ಭೋರ್ಗರೆತವಾಗಿ ಹರಿಯುತ್ತಿರೋದು ಒಂದು ಕಡೆ ಸಂತಸವಾದರೆ, ಇನ್ನೊಂದೆಡೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿಯಿಂದ ಪ್ರವಾಹದ ಸಮಸ್ಯೆಯನ್ನು ಕಾವೇರಿ ಕೊಳ್ಳದ ಜನರು ಎದುರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.