ಕೊಲ್ಲೂರು ದೇಗುಲ ಹೆಸರಲ್ಲಿ ಮೋಸ: ಹಣ ಗೋಲ್ಮಾಲ್!
– ಆನ್ಲೈನ್ ಅಲ್ಲಿ ನಕಲಿ ಪೇಜ್ ರಚಿಸಿ ಹಣ ವಂಚನೆ
– ಹೂಡಿಕೆ ಮಾಡುವ ಹೆಸರಲ್ಲಿ ಲಕ್ಷಾಂತರ ಕನ್ನ!
– ಉಡುಪಿಯಲ್ಲಿ ನಡೆದೆ ಘಟನೆ
– ಅಕ್ರಮ ಗೋಮಾಂಸ ಮಾರಾಟ: ಅರೆಸ್ಟ್
– ಪೊಲೀಸ್ ಮೇಲೆ ಹಲ್ಲೆ: ಗೋಕರ್ಣದಲ್ಲಿ ಘಟನೆ
NAMMUR EXPRESS NEWS
ಮಂಗಳೂರು : ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್ ರಚಿಸಿ ವಂಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ. ದೇಗುಲಕ್ಕೆ ದೇಣಿಗೆ, ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡು ಕಳುಹಿಸಬಹುದು ಎಂದು ಮನವಿ ಮಾಡಲಾಗಿದೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ಬಂದಿದೆ.
ಹೀಗಾಗಿ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೇರಳದಲ್ಲಿ ಈ ಟ್ರಸ್ಟ್ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. 2022ರಿಂದ ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡುತ್ತಿರುವುದು ತಿಳಿದುಬಂದಿದೆ. ಲಕ್ಷಗಟ್ಟಲೆ ದುಡ್ಡು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ತನಿಖೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಉಡುಪಿ: ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ರಾತುಲ್ ಮುಂತಾಜಿ(29) ಎಂಬವರಿಗೆ ಡಿ.10ರಂದು ವಾಟ್ಸಾಪ್ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೆಟಿಂಗ್ ಬಗ್ಗೆ ತಿಳಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿದ್ದು, ವೆಬ್ಸೈಟ್ ಮೂಲಕ ಐಡಿಯನ್ನು ಕ್ರಿಯೇಟ್ ಮಾಡಿ ಹಣ ಹೂಡಿಕೆ ಮಾಡಲು ತಿಳಿಸಿದಂತೆ ಸಿದ್ರಾತುಲ್ ಜ.10ರಿಂದ ಜ.25ರoವರೆಗೆ ಒಟ್ಟು 15,90,000ರೂ. ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣದಲ್ಲಿ 1,20,000ರೂ. ಹಣವನ್ನು ವಾಪಾಸ್ಸು ತೆಗೆದು ಕೊಂಡಿದ್ದು, ಬಳಿಕ ಹೂಡಿಕೆ ಮಾಡಿದ 14,30,000ರೂ. ಹಣದ ಲಾಭಾಂಶವನ್ನು ಕೊಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಅಕ್ರಮ ಗೋಮಾಂಸ ಮಾರಾಟ: ಪೊಲೀಸ್ ವಶಕ್ಕೆ
ಮೂಡಬಿದಿರೆ: ಕೋಲ್ಡ್ ಸ್ಟೋರೇಜ್ ಒಂದರಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿದ್ಧಕಟ್ಟೆ ಸಂಗಬೆಟ್ಟು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ ಕೋಲ್ಡ್ ಸ್ಟೋರೇಜ್ನಲ್ಲಿ ದನದ ಮಾಂಸವನ್ನು ಶೇಖರಿಸಿಟ್ಟು ಮಾರುತ್ತಿರುವ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ 10 ಕೆ.ಜಿ.ಯಷ್ಟು ದನದ ಮಾಂಸ ಪತ್ತೆಯಾಗಿದೆ. ಈ ಹಿಂದೆಯೂ ಅಕ್ರಮವಾಗಿ ದನದ ಮಾಂಸ ಮಾಡುತ್ತಿರುವ ಬಗ್ಗೆ ಇಸ್ಮಾಯಿಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಮೇಲೆ ಹಲ್ಲೆ: ಗೋಕರ್ಣದಲ್ಲಿ ನಡೆದ ಘಟನೆ
ಗೋಕರ್ಣ: ಮಾದಕದ್ರವ್ಯ ಸೇವಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಇಬ್ಬರು ಮಹಿಳಾ ಟೆಕ್ಕಿಗಳನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರನ್ನು ಬಿಹಾರದಪಲ್ಲವಿ ಪ್ರಿಯಾ (29) ಮತ್ತು ಜಾರ್ಖಂಡ್ನ ಪ್ರಿಯಾ ರಾಯ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಗಳಾಗಿರುವ ಇವರು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಮಹಾಬಲೇಶ್ವರ ದೇವಸ್ಥಾನದ ಬಳಿ ನಿಂತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ. ವಾಹನವನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದುದನ್ನು ಕಂಡ ಪೊಲೀಸರು ತಡೆದಾಗ ಮಹಿಳೆಯರು ಕಾನ್ಸ್ಟೆಬಲ್ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ಜನರು ಕಾನ್ಸ್ಟೆಬಲ್ನನ್ನು ರಕ್ಷಿಸಿ ಮಹಿಳೆಯರನ್ನು ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿಯೂ ಮಹಿಳೆಯರು ಮತ್ತೆ ದಾಂಧಲೆ ಎಸಗಿದ್ದಾರೆ. ನಂತರ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಡ್ರಗ್ಸ್ ಸೇವನೆ ಹಾಗೂ ಅಕ್ರಮ ಪಾರ್ಟಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಗೋಕರ್ಣದಲ್ಲಿ ಮಾದಕ ವಸ್ತು ಸೇವನೆ ಮತ್ತು ಗಲಾಟೆ ಸೃಷ್ಟಿಸಿದ ಮಹಿಳೆಯರನ್ನು ಬಂಧಿಸಿರುವುದು ಇದೇ ಮೊದಲು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.