ಮೈಸೂರು ಟಾಪ್ 3 ನ್ಯೂಸ್..!
ಬಸ್ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ..!
– ಚಾಲಕ ಸ್ಪಾಟ್ ಡೆತ್, ನಾಲ್ವರಿಗೆ ಗಾಯ
ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ.!
– 75ರಲ್ಲಿ ಎಫ್ಐಆರ್ ದಾಖಲು
ಕೀಟನಾಶಕ ಸಿಂಪಡಿಸುತ್ತಿದ್ದಾಗ ಹೆಜ್ಜೇನು ದಾಳಿ..!
– ಪತಿ ಸಾವು, ಪತ್ನಿಗೆ ಗಂಭೀರ ಗಾಯ
NAMMUR EXPRESS NEWS
ಮಂಡ್ಯ: ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ರಸ್ತೆಯ ಬೋರಾಪುರದಲ್ಲಿ ಅಪಘಾತ ನಡೆದಿದೆ.
ಮದ್ದೂರಿನಿಂದ ಮಳವಳ್ಳಿ ಕಡೆಗೆ ಸ್ವಿಫ್ಟ್ ಕಾರು ತೆರಳುತ್ತಿತ್ತು. ಕೆಎಸ್ಆರ್ಟಿಸಿ ಬಸ್ ಮಳವಳ್ಳಿಯಿಂದ ಮದ್ದೂರು ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಛಿದ್ರಗೊಂಡಿದೆ. ಬಸ್ನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿ ಐವರು ಪ್ರಯಾಣ ಮಾಡುತ್ತಿದ್ದರು. ಅಪಘಾತದಲ್ಲಿ ಸ್ಥಳದಲ್ಲೇ ಕಾರು ಚಾಲಕ ಮೃತಪಟ್ಟರೆ, ನಾಲ್ವರು ಗಾಯಗೊಂಡಿದ್ದಾರೆ. ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿದ್ದು, ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇನ್ನೂ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕ, ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ಬೋರಾಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮದ್ದೂರು ಪಟ್ಟಣ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಛಿದ್ರಗೊಂಡಿದ್ದ ಕಾರನ್ನು ತೆರವು ಮಾಡಿದ್ದರು. ಮದ್ದೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್ಐಆರ್ ದಾಖಲು:
ಮಂಡ್ಯ: ಹೆಣ್ಣು ಭ್ರೂಣ ಹತ್ಯೆಯಿಂದ ಸದ್ದು ಮಾಡುತ್ತಿರುವ ಮಂಡ್ಯ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 180 ಪ್ರಕರಣಗಳು ವರದಿಯಾಗಿದ್ದು,105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಶಾಲೆ ಮುಗಿಸುವ ಮುನ್ನವೇ ಮದುವೆ ಮುಗಿಸಿ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಬೇಕು ಎನ್ನುವ ಪೋಷಕರ ಮನಸ್ಥಿತಿಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಲೂ ಬಾಲ್ಯ ವಿವಾಹ ಪ್ರಕರಣಗಳೂ ವರದಿಯಾಗುತ್ತಲೇ ಇವೆ.
ಜಾಗೃತಿ ಮೂಡಿಸುತ್ತಿರುವ ನಡುವೆ, ಶಾಲೆಗೆ ಹೋಗಬೇಕು ಎನ್ನುವ ಮಕ್ಕಳ ಉತ್ಕಟ ಬಯಕೆಯ ಮಧ್ಯೆಯೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಮಂಡ್ಯ ಜಿಲ್ಲಾಡಳಿತವೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ತಪ್ಪಿಸಿಕೊಳ್ಳದಂತೆ ಕಣ್ಗಾವಲು ಇಡಲು ಮುಂದಾಗಿದೆ.
ಕೀಟನಾಶಕ ಸಿಂಪಡಿಸುತ್ತಿದ್ದಾಗ ಹೆಜ್ಜೇನು ದಾಳಿ: ಪತಿ ಸಾವು, ಪತ್ನಿಗೆ ಗಂಭೀರ ಗಾಯ:
ಚಾಮರಾಜನಗರ: ಹೆಜ್ಜೇನು ದಾಳಿಯಿಂದ ಪತ್ನಿಗೆ ಗಂಭೀರ ಗಾಯಗಳಾಗಿದ್ದರೆ, ಪತಿ ಸಾವನ್ನಪ್ಪಿರುವಂಹ ಘಟನೆ ಜಿಲ್ಲೆಯ ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ಬಾಳೆ ಬೆಳೆಗೆ ಕೀಟನಾಶಕ ಸಿಂಪಡಿಸುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದ್ದು ದುರಂತ ಸಂಭವಿಸಿದೆ. ತುಳಸಿದಾಸ್(45) ಮೃತ ಪತಿ. ಪತ್ನಿ ಆಶಾಗೆ ಗಂಭೀರ ಗಾಯಗಳಾಗಿದ್ದು, ಹನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.