ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಳ..!
– ಮೈಸೂರು ನಗರಪಾಲಿಕೆಯಿಂದ ದಂಡಾಸ್ತ್ರ ಪ್ರಯೋಗ
– ಯಾವುದೆಲ್ಲ ನಿಷೇಧ? ಇಲ್ಲಿದೆ ವಿವರ
NAMMUR EXPRESS NEWS
ಮೈಸೂರು: ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಸ್ವಚ್ಛ ಸರ್ವೇಕ್ಷಣ್ ರ್ಯಾಂಕಿಂಗ್ನಲ್ಲೂ ಇದು ತೊಡಕಾಗಿ ಪರಿಣಮಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಮಹಾನಗರ ಪಾಲಿಕೆ ದಂಡ ಹಾಕಲು ಮುಂದಾಗಿದೆ. ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನ ನಿಷೇಧಗೊಂಡಿದ್ದರೂ ಅಂಗಡಿ-ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ನಗರದಲ್ಲಿ ನಿತ್ಯ 530 ಟನ್ ಕಸ ಸಂಗ್ರಹ ಮಾಡಲಾಗುತ್ತಿದ್ದು, ಅದರಲ್ಲಿ 30 ಟನ್ ಪ್ಲಾಸ್ಟಿಕ್ ತ್ಯಾಜ್ಯವೇ ಇರುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಳೆದ ಎರಡು ದಿನದಿಂದ ಪಾಲಿಕೆ ದಂಡ ಪ್ರಯೋಗ ಮಾಡುತ್ತಿದೆ.
2 ಲಕ್ಷ ದಂಡ ವಸೂಲಿ :
ಜನರಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಂಗಡಿ, ಮಾಲ್ಗಳಲ್ಲಿ ಇಂದಿಗೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಕಳೆದ ಎರಡು ದಿನದಿಂದ ನಗರಪಾಲಿಕೆ ಆಯುಕ್ತೆ ಡಾ.ಮಧು ಅವರು ನೇತೃತ್ವದಲ್ಲಿ ಅಧಿಕಾರಿಗಳ ತಂಡ 1659 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. 9 ವಲಯಗಳಿಂದ 344 ಕಡೆ ದಾಳಿ ನಡೆಸಿ 2,66,400 ರೂ. ದಂಡ ವಸೂಲಿ ಮಾಡಲಾಗಿದ್ದು, ಸಂತೆಪೇಟೆ ಒಂದರಲ್ಲೇ ಸುಮಾರು 2 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
ಟ್ರೇಡ್ ಲೈಸೆನ್ಸ್ ರದ್ದು :
ನಗರಪಾಲಿಕೆಯಿಂದ ಈಗಾಗಲೇ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ, ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಇದೀಗ ದಂಡ ಪ್ರಯೋಗಿಸಲಾಗುತ್ತಿದೆ. ಎರಡು ಮೂರು ಬಾರಿ ದಂಡ ವಿಧಿಸಿದ ಮೇಲೂ ಸುಧಾರಣೆಯಾಗದಿದ್ದರೆ ಟ್ರೇಡ್ ಲೈಸೆನ್ಸ್ ರದ್ದುಪಡಿಸಲು ನಗರಪಾಲಿಕೆ ತೀರ್ಮಾನಿಸಿದೆ.
ಯಾವುದೆಲ್ಲ ನಿಷೇಧ?
ನಗರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಭಿತ್ತಿಚಿತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್, ಪ್ಲಾಸ್ಟಿಕ್ ಮೈಕ್ರೋಬಿಡ್ನಿಂದ ತಯಾರಾಗುವ ಇತರೆ ವಸ್ತುಗಳು.