ಮೈಸೂರು ಟಾಪ್ 3 ನ್ಯೂಸ್..!
– ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಸಾವು!
– ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಖದೀಮರು.!
– ಪತಿಯಿಂದಲೇ ಕೊಲೆಯಾದ ಭಜರಂಗಿ ನಟಿ ವಿದ್ಯಾ ನಂದೀಶ್
NAMMUR EXPRESS NEWS
ಮೈಸೂರು: ಮೈಸೂರಿನ ಯರಗನಹಳ್ಳಿಯಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬಟ್ಟೆ ಐರನ್ ಕೆಲಸ ಮಾಡುತ್ತಿದ್ದ ಮಂಜುಳಾ (39), ಕುಮಾರಸ್ವಾಮಿ (45), ಅರ್ಚನಾ (19), ಸ್ವಾತಿ (17) ಮೃತ ದುರ್ದೈವಿಗಳು. ಸ್ಥಳಕ್ಕೆ ಕಮಿಷನರ್ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಖದೀಮರು; ಬರೋಬ್ಬರಿ 15,98,761 ರೂ. ವರ್ಗಾವಣೆ:
ಹಾಸನ: ಖದೀಮರು ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ 2 ಬ್ಯಾಂಕ್ ಖಾತೆಯಿಂದ 15,98,761 ರೂ. ಎಗರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದ ಸೈಬರ್ ಖದೀಮರು ಹಣ ಎಗರಿಸಿದ್ದಾರೆ. 2 ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 15,98,761 ಲಕ್ಷ ರೂ ಎಗರಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿವೈಎಸ್ ಪಿ.ಕೆ.ಮುರಳೀಧರ್ ಅವರು ಮಡಿಕೇರಿಯ ಕೆನರಾ ಬ್ಯಾಂಕ್ ಮುಖ್ಯ ಶಾಖೆ ಹಾಗೂ ಭಾಗಮಂಡಲದ ಕೆನರಾ ಬ್ಯಾಂಕ್ನ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ.20 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಫೋನ್ಗೆ ಬಂದ ಮೆಸೇಜ್ಗಳ ಮೂಲಕ ಖದೀಮರ ಕೈಚಳಕ ಗಮನಕ್ಕೆ ಬಂದಿದೆ. ಡಿವೈಎಸ್ಪಿ ಅವರ ಬ್ಯಾಂಕ್ ಖಾತೆಗಳಿಂದ ಅಧಿಕಾರಿಯ ಗಮನಕ್ಕೆ ಬಾರದೆ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.
ಕೆನರಾಬ್ಯಾಂಕ್ ಮಡಿಕೇರಿ ಮುಖ್ಯ ಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,12,711 ರೂ ಮತ್ತು ಕೆನರಾಬ್ಯಾಂಕ್ ಭಾಗಮಂಡಲ ಶಾಖೆ ಖಾತೆಯಿಂದ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 12.56 ಗಂಟೆವರೆಗೆ ಒಟ್ಟು 10 ವರ್ಗಾವಣೆ ಮೂಲಕ ಒಟ್ಟು 3,88,050 ರೂ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಎರಡು ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು 15,98,761 ರೂ ಹಣವನ್ನು ಅಪರಿಚಿತ ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿಯಿಂದಲೇ ಕೊಲೆಯಾದ ಭಜರಂಗಿ ನಟಿ ವಿದ್ಯಾ ನಂದೀಶ್, ಗಂಡ ಪರಾರಿ:
ಮೈಸೂರು: ಭಜರಂಗಿ’, ‘ವೇದ’, ‘ಅಜಿತ್’, ‘ಜೈ ಮಾರುತಿ 800’ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ನಟಿ ವಿದ್ಯಾರನ್ನು ಆಕೆಯ ಪತಿಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿದ್ಯಾ, ಮೈಸೂರು ಕಾಂಗ್ರೆಸ್ನ ಕಾರ್ಯದರ್ಶಿಯೂ ಆಗಿದ್ದರು. ಪತಿಯೇ ವಿದ್ಯಾರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಪತಿ ನಂದೀಶ್ ನಾಪತ್ತೆಯಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾ, ನಟಿಯಷ್ಟೆ ಅಲ್ಲದೆ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಮೈಸೂರು ನಗರ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ವಿದ್ಯಾ ಕೆಲಸ ಮಾಡುತ್ತಿದ್ದರು. ನಟಿ ವಿದ್ಯಾ, 2018ರಲ್ಲಿ ನಂದೀಶ್ ಎಂಬುವರೊಟ್ಟಿಗೆ ವಿವಾಹವಾಗಿದ್ದರು. ಆರಂಭದ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇಬ್ಬರ ನಡುವೆ ಸಲಹ ಸಾಮಾನ್ಯವಾಗಿತ್ತು. ಆಗಾಗ್ಗೆ ಈ ದಂಪತಿಗಳು ಜಗಳ ಮಾಡುತ್ತಲೇ ಇದ್ದರು.
ವಿಚ್ಛೇದನಕ್ಕೂ ಸಹ ಇವರು ಪ್ರಯತ್ನಿಸಿದ್ದರು ಆದರೆ ಪೋಷಕರು ಬುದ್ಧಿವಾದ ಹೇಳಿ ಇಬ್ಬರನ್ನೂ ಒಂದು ಮಾಡಿದ್ದರು. ಆದರೆ ಜಗಳ ಹಾಗೆಯೇ ಮುಂದುವರೆದಿತ್ತು. ಇತ್ತೀಚೆಗೆ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಆಗ ವಿದ್ಯಾ, ಗಂಡನ ಮನೆಯಿರುವ ಮೈಸೂರಿನ ತುರಗನೂರಿನಿಂದ, ತಮ್ಮ ತವರು ಮನೆಯಾದ ಬೆಂಗಳೂರಿನ ಶ್ರೀರಾಮಪುರಕ್ಕೆ ಬಂದಿದ್ದರು. ಮೇ 20 ರಂದು ಸಹ ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್ನಲ್ಲಿ ಜಗಳ ನಡೆದಿತ್ತು. ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಮಪುರದಿಂದ ಹೊರಟು ಮೈಸೂರಿನ ತುರುಗನೂರಿಗೆ ತಲುಪಿ ಗಂಡನೊಟ್ಟಿಗೆ ಮುಖಾ-ಮುಖಿ ಜಗಳಕ್ಕೆ ನಿಂತಿದ್ದರು. ಅಲ್ಲಿಯೂ ಸಹ ಜಗಳ ತಾರಕಕ್ಕೆ ಹೋದಾಗ ಪತಿ ನಂದೀಶ್, ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತದ ರಭಸಕ್ಕೆ ವಿದ್ಯಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಳಿಕ ನಂದೀಶ್ ಅಲ್ಲಿಂದ ಪರಾರಿಯಾಗಿದ್ದಾನೆ.
ಬನ್ನೂರು ಠಾಣೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ. ಸ್ಥಳೀಯರಿಂದ, ಸಂಬಂಧಿಗಳಿಂದ ಮಾಹಿತಿಗಳನ್ನು ಪಡೆದಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ನಂದೀಶ್ಗಾಗಿ ಹುಡುಕಾಟ ಜಾರಿಯಲ್ಲಿದೆ.