ರಸ್ತೆಗಿಳಿಯಲಿವೆ 10,000 ಎಲೆಕ್ಟ್ರಿಕ್ ಬಸ್!
– ಮುಂದಿನ ವಾರ ಪಿಎಂ-ಇಬಸ್ ಸೇವಾ ಯೋಜನೆ ಟೆಂಡರ್
– ಇನ್ಮೇಲೆ ಎಲೆಕ್ಟ್ರಿಕಲ್ ವೆಹಿಕಲ್ ಜಮಾನ
NAMMUR EXPRESS NEWS
ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಾರ, ಇತ್ತೀಚೆಗೆ ಘೋಷಿಸಲಾದ ಪಿಎಂ-ಇಬಸ್ ಸೇವಾ ಯೋಜನೆ ಅಡಿಯಲ್ಲಿ 3,000 ಎಲೆಕ್ಟ್ರಿಕ್ ಬಸ್ಗಳ ಮೊದಲ ಸೆಟ್ ಟೆಂಡರ್ ಮುಂದಿನ ವಾರ ಹೊರ ಬೀಳಲಿದೆ.
ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡ ಯೋಜನೆಯು ಸಂಘಟಿತ ಸಾರ್ವಜನಿಕ ಬಸ್ ಸೇವೆಯ ಕೊರತೆಯಿರುವ ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್ಗಳನ್ನು ಸೇರಿಸುವ ಗುರಿ ಹೊಂದಿದೆ.
ಪ್ರಸ್ತಾವನೆಗಳನ್ನು ಕಳುಹಿಸಲು ರಾಜ್ಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಶುಕ್ರವಾರ ಹೇಳಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ಉದ್ಘಾಟಿಸಿದ 16 ನೇ ಅರ್ಬನ್ ಮೊಬಿಲಿಟಿ ಇಂಡಿಯಾ (ಯುಎಂಐ) ಕಾನ್ಸರೆನ್ಸ್ ಕಮ್ ಎಕ್ಸ್ ಪೋ 2023 ರ ಉದ್ಘಾಟನಾ ಸಮಾರಂಭದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯಗಳು ಈ ಕುರಿತು ಕೆಲಸ ಮಾಡುತ್ತಿವೆ. ಮುಂದಿನ ವಾರದ ವೇಳೆಗೆ ಟೆಂಡರ್ ಹೊರಬರಲಿದೆ ಎಂದು ತಿಳಿಸಿದರು.
ಪಿಎಂ – ಇ ಬಸ್ ಸೇವಾ ಅಡಿಯಲ್ಲಿ 169 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಇ-ಬಸ್ಗಳನ್ನು ನಿಯೋಜಿಸಲಾಗುವುದು. ಜೊತೆಗೆ ಸಂಬಂಧಿತ ಮೂಲಸೌಕರ್ಯ, ಬಸ್ ಡಿಪೋಗಳು ಮತ್ತು ಮೀಟರ್ನ ಹಿಂದಿನ ವಿದ್ಯುತ್ ಮೂಲಸೌಕರ್ಯಗಳಿಗೆ ಬೆಂಬಲ ನೀಡಲಾಗುವುದು.
ಇದಲ್ಲದೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಸ್ ಆದ್ಯತೆಯ ಮೂಲಸೌಕರ್ಯ, ಮಲ್ಟಿಮೋಡಲ್ ಇಂಟರ್ಚೇಂಜ್ ಸೌಲಭ್ಯಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ ಅಡಿಯಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಈ ಯೋಜನೆಗೆ 57,613 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರ 20,000 ಕೋಟಿ ರೂ. ನೆರವು ನೀಡಲಿದೆ. ಈ ಯೋಜನೆಯು 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.