45 ದಿನಕ್ಕೆ ಎರಡೂವರೆ ಲಕ್ಷ ದುಡಿಯುವ ಭಿಕ್ಷುಕಿ.!
– ಈಕೆ ಬಳಿಯಲ್ಲಿದೆ ಸ್ವಂತ ಮನೆ, ಕಾರ್, ಸ್ಮಾರ್ಟ್ಫೋನ್!
– ಭಿಕ್ಷುಕ ಮುಕ್ತ ನಗರ ಅಭಿಯಾನದಡಿ ಕ್ರಮ
NAMMUR EXPRESS NEWS
ಇಂದೋರ್:ಸಾಮಾನ್ಯವಾಗಿ ಭಿಕ್ಷುಕರು ಚಿಲ್ಲರೆ ಹಣದಲ್ಲಿ ಎಷ್ಟು ಪಡೆಯಬಹುದು? ಭಿಕ್ಷೆಯಿಂದ ಬರೋ ಹಣ ಅವರು ಹೊಟ್ಟೆ ತುಂಬಿಸಿಕೊಳ್ಳಲು ಸಾಕಾಗುತ್ತೋ ಇಲ್ಲವೋ ಅನ್ನೋ ಕಲ್ಪನೆ ಇರುತ್ತೆ. ಆದರೆ ಭಿಕ್ಷೆ ಬೇಡಿ ಒಂದು ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಅಂದರೆ ಬಾಯಿ ಮೇಲೆ ಬೆರಳಿಟ್ಟು ಅಚ್ಚರಿಯಾಗೋದು ಗ್ಯಾರಂಟಿ. ಇಂದೋರ್ ನಲ್ಲಿ ಭಿಕ್ಷಾಟನೆ ಮಾಡುವ ಮಹಿಳೆಯೊಬ್ಬರು ಕೇವಲ 45 ದಿನಗಳಿಗೆ 2.5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಭಿಕ್ಷಾಟನೆಯಲ್ಲಿ ಸಂಪಾದಿಸುವ ಹಣದಲ್ಲಿ ಸುಮಾರು 1 ಲಕ್ಷವನ್ನು ರಾಜಸ್ಥಾನದಲ್ಲಿರುವ ತಮ್ಮ ಇಬ್ಬರು ಮಕ್ಕಳಿಗೆ ಕಳುಹಿಸುತ್ತಾರೆ. ಉಳಿದ 1.5 ಲಕ್ಷದಲ್ಲಿ, 50,000ರೂ. ಸ್ಥಿರ ಠೇವಣಿ ಮಾಡುತ್ತಿದ್ದು, ಉಳಿದ 50,000 ರೂ. ಕುಟುಂಬಕ್ಕೆ ಖರ್ಚು ಮಾಡಲಾಗುತ್ತಿದೆ. ಈಕೆಯ ಕುಟುಂಬಸ್ಥರು ಸ್ವಂತ ಮನೆ, ಭೂಮಿ, ಕಾರು, ಸ್ಮಾರ್ಟ್ಫೋನ್ಗಳು ಎಲ್ಲಾ ಸೌಕರ್ಯಗಳು ಇಟ್ಟುಕೊಂಡಿದ್ದಾರೆ.
ತಿಂಗಳಿಗೆ ಎರಡೂವರೆ ಲಕ್ಷ ದುಡಿಯುವ ಮಹಿಳೆ:
ಬೀದಿಗಳಲ್ಲಿ ಸುತ್ತುತ್ತಾ ಭಿಕ್ಷುಕಿ ಒಂದೂವರೆ ತಿಂಗಳಿಗೆ 2.5 ಲಕ್ಷ ಸಂಪಾದಿಸುತ್ತಿದ್ದಾರೆ. ನಗರದ ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಸೂಚನೆ ಮೇರೆಗೆ ನಗರದಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಲಾಗಿತ್ತು. ಈ ವೇಳೆ 8 ವರ್ಷದ ಬಾಲಕಿಯ ವಿಚಾರಣೆ ವೇಳೆ ತಿಂಗಳಿಗೆ 2.5 ಲಕ್ಷ ಭಿಕ್ಷೆಯಲ್ಲಿ ದುಡಿಯುತ್ತಿರುವ ಈ ಮಹಿಳೆ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳ ತನಿಖೆಯಲ್ಲಿ ಈ ಕುಟುಂಬ ಭಿಕ್ಷಾಟನೆಯನ್ನೇ ಕಸುಬು ಮಾಡಿಕೊಂಡಿರೋದು ತಿಳಿದು ಬಂದಿದೆ. ಭಿಕ್ಷುಕಿಯ ಗಂಡ, ಮಕ್ಕಳು ಸಹ ಭಿಕ್ಷೆ ಬೇಡುತ್ತಿದ್ದಾರೆ. ದಂಪತಿಗೆ ಐವರು ಮಕ್ಕಳು: ಈ ಭಿಕ್ಷುಕ ದಂಪತಿಗೆ ಒಟ್ಟು ಐವರು ಮಕ್ಕಳಿದ್ದಾರೆ. ಮೂವರು ಮಕ್ಕಳು ಇಂದೋರ್-ಉಜ್ಜಯಿನಿ ರಸ್ತೆಯಲ್ಲಿರುವ ಬವರ್ಸಾಲಾ ಚೌಕ, ಲವ್ ಕುಶ್ ಚೌಕದಲ್ಲಿ ಭಿಕ್ಷೆ ಬೇಡುತ್ತಾರೆ. ಇನ್ನು ಎರಡು ಮಕ್ಕಳು ರಾಜಸ್ಥಾನದಲ್ಲಿ ತಾತನ ಜೊತೆ ಇದ್ದಾರೆಂದು ತಿಳಿದು ಬಂದಿದೆ.
ಒಂದೇ ವಾರದಲ್ಲಿ 19 ಸಾವಿರಕ್ಕೂ ಅಧಿಕ ಹಣ:
ಕೇವಲ ಒಂದೇ ವಾರದಲ್ಲಿ 19,200 ರೂಪಾಯಿ ಭಿಕ್ಷೆ ಬೇಡಿ ಸಂಪಾದಿಸಿರೋದಾಗಿ ತಿಳಿದು ಬಂದಿದೆ. ಹಾಗೇ ಹಬ್ಬಹರಿದಿನಗಳ ಸಂದರ್ಭದಲ್ಲಿ 50,000 ರೂ. ಸಂಪಾದಿಸುವುದಾಗಿ ಹೇಳಿದ್ದಾಳೆ. ಇನ್ನು ಈಕೆಯ ಮಗಳು ಬೆಳಗ್ಗೆಯಿಂದ ಮಧ್ಯಾಹ್ನ 1.30ರವರೆಗೂ ಭಿಕ್ಷೆ ಬೇಡಿ 600 ರೂ. ತಾಯಿಗೆ ನೀಡುತ್ತಾಳಂತೆ. ಭಿಕ್ಷುಕ ಮುಕ್ತ ನಗರ ಅಭಿಯಾನ: ಭಾರತದಲ್ಲಿ ಭಿಕ್ಷಾಟನೆ ಸಾಮಾನ್ಯ. ಸರ್ಕಾರ ಮೂಲಭೂತ ಸೌಕರ್ಯ ಒದಗಿಸಿ, ಭಿಕ್ಷುಕರ ಮುಕ್ತ ನಗರ ಮಾಡಲು ಪ್ರಯತ್ನಿಸುತ್ತಲೇ ಇದೆ. ಇಂದೋರ್ನ ಜಿಲ್ಲಾಡಳಿತ ತಂಡವು ಭಿಕ್ಷುಕ ಮುಕ್ತ ನಗರ ಅಭಿಯಾನದಡಿ ತಂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅವರಿಗೆ ಕೌನ್ಸೆಲಿಂಗ್ ನಡೆಸುತ್ತಿದೆ.