ಅನಾರೋಗ್ಯಗೊಂಡ ಸಾಕುನಾಯಿ ಹುಷಾರಾಗಲು ದೇವರ ಮೊರೆ!
– ತುಲಾಭಾರ ಸೇವೆ ಮಾಡಿದ ಮನೆಯವರು!
– ತೆಲಂಗಣದಲ್ಲಿ ನಡೆದ ಹೃದಯಸ್ಪರ್ಶಿ ಘಟನೆ
NAMMUR EXPRESS NEWS
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಟ್ರೆಂಡ್ ಹೆಚ್ಚಾಗ್ತಿದೆ. ಅದು ಕೂಡ ತಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳುವವರ ಸಂಖ್ಯೆ ತುಂಬಾನೆ ಇದೆ. ಇದೀಗ ಅದಕ್ಕೊಂದು ಸ್ಪಷ್ಟ ಉದಾಹರಣೆಯೆಂಬಂತೆ ತೆಲಂಗಾಣದಲ್ಲಿ ಘಟನೆಯೊಂದು ನಡೆದಿದೆ. ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಕುಟುಂಬವೊಂದು ಅನಾರೋಗ್ಯ ಪೀಡಿತ ತಮ್ಮ ಪ್ರೀತಿಯ ಸಾಕು ನಾಯಿ ಗುಣಮುಖಲಾಗಲೆಂದು ದೇವರಿಗೆ ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸಿ ಬೇಡಿಕೊಂಡ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ತೆಲಂಗಾಣದ ಮುಲುಗು ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಮನೆಯವರು ತಮ್ಮ ನಾಯಿ ಅನಾರೋಗ್ಯಗೊಂಡಿದ್ದರಿಂದ ಗುಣಮುಖವಾಗಲೆಂದು ಹರಕೆ ಸಲ್ಲಿಸಿ ದೇವಿಗೆ ಬೆಲ್ಲದ ತುಲಾಭಾರ ಸೇವೆ ಅರ್ಪಿಸಿ ನಾಯಿಯ ಆರೋಗ್ಯ ಉತ್ತಮವಾಗಲೆಂದು ಪ್ರಾರ್ಥಿಸಿದ್ದಾರೆ. ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಡೀ ಕುಟುಂಬ ನಾಯಿಯ ಆರೋಗ್ಯಕ್ಕಾಗಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಿರುವುದು ಕಂಡು ಬಂದಿದೆ.
ಅಂದ ಹಾಗೆ, ಜ್ಯೋತಿ ಮತ್ತು ಬಿಕ್ಷಾಪತಿ ಎಂಬ ದಂಪತಿಯ ಮನೆಯಲ್ಲಿ ‘ಲಿಯೋ’ ಎಂಬ ನಾಯಿ ಇದೆ. ಕೆಲವು ದಿನಗಳಿಂದ ನಾಯಿಗೆ ಹುಷಾರಿರಲಿಲ್ಲ. ಹೀಗಾಗಿ ನಾಯಿಯ ಆರೋಗ್ಯದ ಬಗ್ಗೆ ಕುಟುಂಬದವರು ಚಿಂತಾಕ್ರಾಂತರಾಗಿದ್ದರು. ಕುಟುಂಬಸ್ಥರು ವೈದ್ಯರ ಬಳಿ ಹೋಗಿ ನಾಯಿಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅವರಿರವರಲ್ಲಿ ಕೇಳಿದರೂ ಪ್ರಯೋಜನವಾಗಿಲ್ಲ. ನಂತರ ಈ ಕುಟುಂಬದವರು ನೇರವಾಗಿ ಸ್ಥಳೀಯ ಸಮ್ಮಕ್ಕ ಸರಳಮ್ಮ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.
ಕುಟುಂಬಸ್ಥರು ತಮ್ಮ ನಾಯಿ ಲಿಯೋ ಸಂಪೂರ್ಣ ಗುಣಮುಖವಾಗಲಿ ಎಂದು ಹಾರೈಸಿ ದೇವಾನುದೇವತೆಗಳಿಗೆ ನಾಯಿಯ ತೂಕಕ್ಕೆ ಸಮನಾದ ಬೆಲ್ಲವನ್ನು ಅರ್ಪಿಸಿ ತುಲಾಭಾರ ಸೇವೆ ಮಾಡಿದ್ದಾರೆ. ತುಲಾಭಾರ ಸೇವೆ ಮಾಡಿದ ನಂತರ ಅವರ ಹರಕೆಗೆ ಪ್ರತಿಫಲ ಸಿಕ್ಕಿದ್ದು, ನಾಯಿ ಗುಣಮುಖವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪವಾಡವೆಂಬಂತೆ ಲಿಯೋ ಮತ್ತೆ ಆರೋಗ್ಯವಂತನಾಗಿದ್ದು, ಇದಾದ ಬಳಿಕ ಸಮ್ಮಕ್ಕ ದೇವಿಗೆ ಮತ್ತೊಮ್ಮೆ ಬೆಲ್ಲವನ್ನು ಅರ್ಪಿಸಿ ತುಲಾಭಾರ ಸೇವೆ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಮನುಷ್ಯರು ಮತ್ತು ಅವರ ಪ್ರೀತಿಯ ಸಾಕುಪ್ರಾಣಿಯ ನಡುವಿನ ಸಂಬಂಧದ ಆಳವನ್ನು ತೋರಿಸುತ್ತದೆ.