ನಿಮ್ಮ ಆಧಾರ್ ಅಂತೆ ಬರಲಿದೆ ಭೂಮಿಗೂ ಆಧಾರ್ ಕಾರ್ಡ್!
– ಜಮೀನುಗಳಿಗೂ ವಿಶೇಷ ಗುರುತಿನ ಸಂಖ್ಯೆ ಭೂ-ಆಧಾರ್ ಜಾರಿ
– ಆಸ್ತಿಗಳ ಡಿಜಿಟಲೀಕರಣ: ಭೂ ಆಕ್ರಮಗಳಿಗೆ ಕಡಿವಾಣ!
NAMMUR EXPRESS NEWS
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಅನೇಕ ಭೂ ಸುಧಾರಣೆ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂಮಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಭೂ ಆಧಾರ್ ನೀಡಲಾಗುವುದು. ಎಲ್ಲಾ ನಗರ ಭೂ ದಾಖಲೆಗಳ ಡಿಜಟಲೀಕರಣ ಮಾಡಲಿದ್ದು, ಈ ಮೂಲಕ ಭೂ ಆಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭೂಸುಧಾರಣೆ ಕೈಗೊಳ್ಳಲು ಕೇಂದ್ರವು ರಾಜ್ಯಗಳೊಂದಿಗೆ ಕೆಲಸ ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸುಧಾರಣೆ ಪೂರ್ಣಗೊಳಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭೂ ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಎರಡು ರೀತಿಯಲ್ಲಿ ಕೈಗೊಳ್ಳಲಾಗುವುದು.
ಒಂದು -ಭೂ ಆಡಳಿತ ಯೋಜನೆ ಮತ್ತು ನಿರ್ವಹಣೆ, ಎರಡು- ನಗರ ಯೋಜನೆ, ಬಳಕೆ ಮತ್ತು ಕಟ್ಟಡ ಬೈಲಾಗಳನ್ನು ಈ ಸುಧಾರಣಾ ಕ್ರಮಗಳು ಒಳಗೊಂಡಿದೆ. ಗ್ರಾಮೀಣ ಭೂಮಿ ಸಂಬಂಧಿತ ಕ್ರಮಗಳು ಎಲ್ಲಾ ಜಮೀನುಗಳಿಗೆ ಭೂ ಪಾರ್ಸೆಲ್ ಗುರುತಿನ ಸಂಖ್ಯೆ ಅಥವಾ ಭೂ ಆಧಾರ್ ಒಳಗೊಂಡಿರುತ್ತದೆ. ನಕ್ಷೆಗಳ ಪ್ರಸ್ತುತ ಮಾಲೀಕತ್ವದ ಪ್ರಕಾರ ನಕ್ಷೆ, ಉಪ ವಿಭಾಗಗಳ ಸಮೀಕ್ಷೆ, ಭೂ ನೋಂದಣಿ ರಚನೆ, ರೈತರ ನೋಂದಣಿಗೆ ಲಿಂಕ್ ಮಾಡುವುದು ಪ್ರಮುಖ ಕ್ರಮಗಳಾಗಿವೆ. ಈ ಕ್ರಮಗಳಿಂದ ಕೃಷಿ ಸೇವೆ, ಸಾಲ ನೀಡಿಕೆ ಸುಲಭವಾಗಲಿದೆ. ನಗರ ಪ್ರದೇಶಗಳ ಭೂದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಆಸ್ತಿ ದಾಖಲೆ ನಿರ್ವಹಣೆ, ನವೀಕರಣ, ತೆರಿಗೆ ಆಡಳಿತಕ್ಕೆ ಐಟಿ ಆಧಾರಿತ ವ್ಯವಸ್ಥೆ ಸ್ಥಾಪಿಸಲಾಗುವುದು. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ಅನುಕೂಲವಾಗುತ್ತದೆ ಎನ್ನಲಾಗಿದೆ.